ಮೊನ್ನೆ ಮೊನ್ನೆಯವರೆಗೆ ಸಾಲು ಸಾಲು ಬಹುಭಾಷಾ ಚಿತ್ರಗಳು, ಟಿವಿ ಕಾರ್ಯಕ್ರಮ ನಿಭಾಯಿಸುತ್ತಾ ತೀರಾ ಬ್ಯುಸಿ ಆಗಿದ್ದ ಈ ಡೈಲಾಗ್ ಕಿಂಗ್ ಸಾಯಿ ಕುಮಾರ್ ಇದೀಗ ಖಾಲಿ ಹೊಡೆಯುತ್ತಿದ್ದಾರಾ? ಹಾಗಂತ ಅನುಮಾನ ಬಂದರೆ ಅದು ಯಾರ ತಪ್ಪೂ ಅಲ್ಲ. ಯಾಕೆಂದರೆ, ಸಾಯಿ ಕುಮಾರ್ ಕೈಯಲ್ಲೀಗ ನಾಯಕತ್ವದ ಯಾವುದೇ ಚಿತ್ರವೂ ಇಲ್ಲ. ಹೀರೋ ಎಂದು ಒಪ್ಪಿಕೊಂಡಿದ್ದ ಒಂದು ವರ್ಗದ ಪ್ರೇಕ್ಷಕರು ತಮ್ಮ ಹೀರೊನನ್ನು ಬದಲಿಸಿಕೊಂಡಿದ್ದಾರೆ. ಹಾಗಾಗಿ ಈ ಡೈಲಾಗ್ ಕಿಂಗ್ ಕೂಡಾ ತಮ್ಮ ಹೀರೋ ಆಗೋದನ್ನು ಬಿಟ್ಟು ಪೋಷಕ ಪಾತ್ರಗಳೆಡೆಗೆ ಮನಸ್ಸು ತಿರುಗಿಸಿದ್ದಾರೆ.
ಡೈಲಾಗ್ ಡಿಲೆವರಿ, ಫೈಟ್ ಮೂಲಕ ಕನ್ನಡದ ಅಭಿಮಾನಿಗಳು ಮಾತ್ರವಲ್ಲ, ನಾನಾ ಭಾಷೆಯ ಅಭಿಮಾನಿಗಳುನ್ನು ಹಿಡಿದಿಟ್ಟ ಸಾಯಿ ಕುಮಾರ್ ಇದೀಗ ಖಾಲಿ ಕೈಯಲ್ಲಿದ್ದಾರಂತೆ. ಇವರ ಚಿತ್ರಗಳು ನಾಲ್ಕಾರು ವರ್ಷಗಳ ಹಿಂದೆ ತುಂಬಿ ತುಳುಕುತ್ತಿದ್ದ ರೀತಿ ಈಗಿಲ್ಲ. ಈಗೆಲ್ಲಾ ಅವರ ಚಿತ್ರಗಳು ಎರಡನೇ ದಿನವೇ ಬಿಕೋ ಎನ್ನುತ್ತಿವೆ. ಇದರಿಂದ ಅನೇಕ ನಿರ್ಮಾಪಕರೂ ಇವರತ್ತ ಸುಳಿಯುತ್ತಿಲ್ಲ.
ಇದನ್ನು ಬಹುಬೇಗ ಅರಿತ ಸಾಯಿ ಕುಮಾರ್ ತಮ್ಮ ಇಮೇಜ್ ಬದಲಿಸಿಕೊಂಡು ಪೋಷಕ ಪಾತ್ರಗಳತ್ತ ವಾಲಲು ನಿರ್ಧರಿಸಿದ್ದಾರೆ. ಹೀರೋ ಪಾತ್ರ ಸಿಕ್ಕರೆ ಅಭಿನಯಿಸುವೆ, ಇಲ್ಲವಾದರೆ ಪೋಷಕ ಪಾತ್ರದಲ್ಲಿ ಅಭಿನಯಿಸಿ ಜನರ ಮನಸ್ಸನಲ್ಲಿ ಉಳಿದುಕೊಳ್ಳುವ ಚಿಂತನೆ ಯತ್ನಿಸುತ್ತಿದ್ದಾರೆ. ತೆಲುಗಿನಲ್ಲಿ ಅತ್ಯಂತ ಜನಪ್ರಿಯ ಪೋಷಕ ನಟರೆನಿಸಿರುವ ಪ್ರಕಾಶ್ ರೈ ಥರ ತಾವೂ ಸವಾಲಿನ ಪಾತ್ರವನ್ನು ಆಯ್ಕೆ ಮಾಡಿಕೊಂಡು ತಮಗೇ ಇನ್ನೊಂದು ವಿಶೇಷ ಇಮೇಜ್ ತಂದುಕೊಳ್ಳಲು ಯತ್ನಿಸುತ್ತಿದ್ದಾರೆ.
ಇವರೀಗ ಅಭಿನಯಿಸುತ್ತಿರುವ ಚಿತ್ರ 'ಪ್ರಸ್ತಾನಂ'. ತಾವು ಮಹತ್ವಾಕಾಂಕ್ಷೆಯನ್ನು ಈ ಚಿತ್ರದಲ್ಲಿ ಇರಿಸಿಕೊಂಡಿದ್ದು, ಯಶಸ್ಸು ಕಾಣಲಿದೆ ಎಂದು ಹೇಳಿಕೊಂಡಿದ್ದಾರೆ. ಕನ್ನಡ, ತೆಲುಗು ಕಿರುತೆರೆಯಲ್ಲಿ ಏಕಕಾಲಕ್ಕೆ 'ಡೀಲ್ ಆರ್ ನೋ ಡೀಲ್' ಎಂದಿದ್ದ ಸಾಯಿಕುಮಾರ್ ಇಲ್ಲಿ ತಮ್ಮ ಇಮೇಜ್ ಛಾಪು ಮೂಡಿಸಲಾಗದೇ ಹೋದರು. ಈಗ ಆ ಕಾರ್ಯಕ್ರಮ ಆಯೋಜಿಸಿದ್ದ ಟಿವಿ ಚಾನೆಲ್ ಕಾರ್ಯಕ್ರಮವನ್ನೇ ನಿಲ್ಲಿಸಿದೆ. ಹೀಗಾಗಿಯೋ ಏನೋ, ಟಿವಿಯಿಂದಲೂ ಹೊರಬಂದು, ಸಾಯಿ ಪೋಷಕ ಪಾತ್ರಗಳಿಗೆ ತಲೆ ಹಾಕಲು ಹೊರಟಿದ್ದು. ಒಟ್ಟಾರೆ ಅವರ ಹೊಸ ಭವಿಷ್ಯಕ್ಕೆ ಗುಡ್ ಲಕ್ ಹೇಳೋಣ.