ಗಣೇಶ್ ಗೆಲುವಿನ ಸಂಭ್ರಮದ ಹುಡುಕಾಟದಲ್ಲಿ ಇದ್ದಾರೆ. ಕೆಲ ತಿಂಗಳ ಹಿಂದೆಯಷ್ಟೇ ತೆರೆಕಂಡ ಮಳೆಯಲಿ ಜೊತೆಯಲಿ ಅಷ್ಟಕ್ಕಷ್ಟೆ ಎನ್ನುವಂತೆ ಓಡಿದೆ. ಆದರೆ ಹಿಂದೆಲ್ಲಾ ತೋಪು ಚಿತ್ರಕ್ಕೆ ಹೋಲಿಸುವ ಮಟ್ಟಕ್ಕೆ ಸೋತಿಲ್ಲ. ಹೀಗಾಗಿ ಮಳೆಯ ಗೆಲುವಿನ ಹುಲ್ಲುಕಡ್ಡಿ ಆಧರಿಸಿ ಇವರು ದಡ ಸೇರಲು ತವಕಿಸುತ್ತಿದ್ದಾರೆ. ಅಂಥ ಸಂದರ್ಭದಲ್ಲಿ ಇದೀಗ ಗಣೇಶ್ ಅಭಿನಯದ ಯಾವ್ತತೋ ಬಿಡುಗಡೆಯಾಗಬೇಕಿದ್ದ ಉಲ್ಲಾಸ ಉತ್ಸಾಹ ಚಿತ್ರ ತೆರೆಗೆ ಬರಲು ಸಜ್ಜಾಗಿ ನಿಂತಿದೆ. ಇದೇ ಏ.30ರಂದು ಉಲ್ಲಾಸ ಉತ್ಸಾಹ ಬಿಡುಗಡೆಯಾಗಲಿದೆ.
ತೆಲುಗಿನ ಉಲ್ಲಾಸಂಗ ಉತ್ಸಾಹಂಗ ಚಿತ್ರದ ರಿಮೇಕ್ ಆಗಿರುವ ಈ ಚಿತ್ರದಲ್ಲಿ ಗಣೇಶ್ ಹಾಗೂ ಯಾಮಿ ಗೌತಮಿ ನಟಿಸಿದ್ದಾರೆ. ಆದರೆ ನಿರ್ಮಾಪಕರ ನಡುವಿನ ಯಾವುದೋ ಕಾರಣದಿಂದ ಈ ಚಿತ್ರ ಸುಮಾರು ಆರೇಳು ತಿಂಗಳ ಹಿಂದೆಯೇ ಬಿಡುಗಡೆಯಾಗಬೇಕಿತ್ತಾದರೂ, ಬಿಡುಗಡೆ ಕಾಣಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಗಣೇಶ್ ಕೂಡಾ ತಮ್ಮ ಉಲ್ಲಾಸದ ಆಸೆ ಬಿಟ್ಟು ಮಳೆಯಲಿ ಜೊತೆಯಲಿ ಹಾಡಿದ್ದರು. ಜೊತೆಗೆ ಎಲ್ಲೇ ಹೋದರೂ, ಉಲ್ಲಾಸ ಉತ್ಸಾಹದ ಬಗ್ಗೆ ಚಕಾರವೆತ್ತುತ್ತಿರಲಿಲ್ಲ.
ಕೊನೆಗೂ ಅದ್ಹೇಗೋ ಚಿತ್ರ ಪೂರ್ತಿಯಾಗಿ ರೆಡಿಯಾಗಿದೆಯಂತೆ. ಗಣೇಶ್ ಹಾಗೂ ಪತ್ನಿ ಶಿಲ್ಪಾ ಚಿತ್ರದ ಪ್ರಥಮ ಪ್ರತಿ ವೀಕ್ಷಿಸಿ ಖುಷಿಯಾಗಿದ್ದಾರಂತೆ. ಅದೇನೇ ತೊಂದರೆ ಆದರೂ, ಚಿತ್ರ ಮಾತ್ರ ಅಧ್ಭುತವಾಗಿ ಹೊರಬಂದಿದೆ ಎಂದು ಗಣೇಶ್ ಪತ್ನಿ ಶಿಲ್ಪಾ ಹಾಡಿ ಹೊಗಳಿದ್ದಾರೆ. ಚಿತ್ರದಲ್ಲಿ ಕ್ಯಾಮರಾ ಕೈಚಳಕ ಚೆನ್ನಾಗಿದ್ದು, ತಾಂತ್ರಿಕವಾಗಿಯೂ, ನಟನೆಯಿಂದಲೂ ಎಲ್ಲಾ ವಲಯದಲ್ಲೂ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಹಾಗಾಗಿ ಗಣೇಶ್ ಅಭಿಮಾನಿಗಳಿಗೆ ಇದು ಉತ್ತಮ ಕೊಡುಗೆ ಎಂದಿದ್ದಾರೆ ಶಿಲ್ಪಾ.
ಮದುವೆ ಮನೆಯಲ್ಲಿ ಗಣೇಶ್: ಇದರ ಜೊತೆಜೊತೆಗೇ ಗಣೇಶ್ ಇನ್ನೊಂದೆಡೆ ಮದುವೆ ಸಾಹಸಕ್ಕೆ ಮುಂದಾಗಿದ್ದಾರೆ. ಗಾಬರಿ ಬೇಡ. ಗಣೇಶ್ ಮುಂದಿನ ಚಿತ್ರದ ಹೆಸರು ಮದುವೆ ಮನೆ. ನಾಯಕಿ ಶ್ರದ್ಧಾ ಆರ್ಯ. ಈ ಚಿತ್ರದಲ್ಲಿ ಗಣೇಶ್ ಮತ್ತೆ ಮಾತು-ಮಂಥನ ನಡೆಸಲಿದ್ದಾರಂತೆ. ಕಿರುತೆರೆಯಲ್ಲಿ ಗೋಧೂಳಿ ಮೊದಲಾದ ಧಾರಾವಾಹಿ ನಿರ್ದೇಶಕ ಸುನೀಲ್ ಕುಮಾರ್ ಸಿಂಗ್ ಈ ಚಿತ್ರದ ನಿರ್ದೇಶಕರು. ಈ ಚಿತ್ರ ಮೊನ್ನೆಯಷ್ಟೇ ಸೆಟ್ಟೇರಿದೆ. ಯಜಮಾನ, ಹುಚ್ಚ ಮತ್ತಿತರ ಚಿತ್ರ ನಿರ್ಮಿಸಿದ ರೆಹಮಾನ್ ಅವರ ನಿರ್ಮಾಣದಲ್ಲಿ ಚಿತ್ರ ಬರುತ್ತಿದೆ.
ಈ ಮದುವೆ ಮನೆ ಚಿತ್ರ ರಾಮಾಯಣದ ಕಥೆ ಆಧರಿಸಿದ ಚಿತ್ರವಾಗಿದ್ದು, ಇದು ಹಿಂದಿಯ ದಿಲ್‌ವಾಲೇ ದುಲ್ಹನಿಯಾ ಲೇ ಜಾಯೇಂಗೇ ಚಿತ್ರದ ರಿಮೇಕ್ ಅಂತೂ ಖಂಡಿತ ಅಲ್ಲ ಎನ್ನುತ್ತಿದ್ದಾರೆ ಗಣೇಶ್. ರಾಮಾಯಣದ ಸೀತಾ ಸ್ವಯಂವರ ಇತ್ಯಾದಿ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮತ್ತೊಂದು ನವಿರು ಕಥೆ ಹೆಣೆಯಲಾಗಿದೆಯಂತೆ. ಅಂದಹಾಗೆ ಇತ್ತೀಚೆಗೆ ಜುಗಾರಿ ಚಿತ್ರದಲ್ಲಿ ವಿಮರ್ಶಕರಿಂದ ಸೈ ಎನಿಸಿಕೊಂಡಿದ್ದ ಹಿರಿಯ ಹಾಸ್ಯನಟ ನರಸಿಂಹರಾಜು ಅವರ ಮೊಮ್ಮಗ ಅವಿನಾಶ್ ಕೂಡಾ ಪ್ರಮುಖ ಪಾತ್ರದಲ್ಲಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಅಬ್ಬಾಯಿ ನಾಯ್ಡು ಸ್ಟುಡಿಯೊದಲ್ಲಿ ವಿಜೃಂಭಣೆಯಿಂದ ನಡೆದಿದ್ದು, ಚಿತ್ರೀಕರಣ ಭರದಿಂದ ಸಾಗಿದೆ.