ಐಪಿಎಲ್: ಸೆಮಿಯಲ್ಲಿ ಬೆಂಗಳೂರು ಸೋತಿದ್ದಕ್ಕೆ ರಮ್ಯಾಗೆ ಬೇಜಾರು!
WD
ಐಪಿಎಲ್-3ಯ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಮುಂಬೈ ಜೊತೆ ಸೋತಿದ್ದಕ್ಕೆ ಬೆಂಗಲೂರು ತಂಡದ ಚೀಯರ್ ಲೀಡರ್, ನಟಿ ರಮ್ಯಾಗೆ ಸಿಕ್ಕಾಪಟ್ಟೆ ಬೇಜಾರಾಗಿದೆ. ಅವರು ತಮ್ಮ ಫೇಸ್‌ಬುಕ್‌ನಲ್ಲಿ ತಮ್ಮ ಬೇಸರ ಹೊರಹಾಕಿದ್ದಾರೆ. ಕೆಲವನ್ನು ಗೆಲ್ಲುತ್ತೇವೆ, ಕೆಲವನ್ನು ಸೋಲುತ್ತೇವೆ. ಜೀವನ ಹೀಗೇ ನಡೆಯುತ್ತದೆ. ಆದರೆ ನಾನು ಯಾವತ್ತೂ ಆಟವನ್ನು ಭಾವನಾತ್ಮಕವಾಗಿ ಪರಿಗಣಿಸಿಲ್ಲ. ಆದರೂ ಈ ಪಂದ್ಯ ಸೋತಿದ್ದು ಬೇಸರವಾಯಿತು. ಹಾಗಿದ್ದರೂ ನಾನು ಯಾವತ್ತೂ ಬೆಂಗಳೂರು ತಂಡದ ಅಭಿಮಾನಿ. ಫೈನಲ್‌ನಲ್ಲಿ ಅತ್ಯುತ್ತಮ ತಂಡ ವಿಜಯಿಯಾಗಲಿ. ಮುಂದಿನ ತಂಡಗಳ ಆಟಗಳಿಗೆ ಶುಭ ಹಾರೈಕೆಗಳು ಎಂದು ರಮ್ಯಾ ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದಾರೆ.
ಇದಕ್ಕೂ ಮೊದಲು ಸೆಮಿ ಫೈನಲ್‌ಗೂ ಮೊದಲು ರಮ್ಯಾ, ಖಂಡಿತವಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೆಮಿಯಲ್ಲಿ ವಿಜಯಿಯಾಗಿ ಫೈನಲ್‌ಗೆ ಹೋಗುತ್ತೆ. ಫೈನಲ್‌ಗೆ ಡೆಕ್ಕನ್ ಚಾರ್ಜರ್ಸ್ ಮುಖಾಮುಖಿಯಾಗಿ ಈ ಬಾರಿ ನಮ್ಮ ಬೆಂಗಳೂರು ಚಾಂಪಿಯನ್ ವಿಜಯಮಾಲೆ ಧರಿಸುತ್ತದೆ ಎಂದು ರಮ್ಯಾ ಭವಿಷ್ಯ ನುಡಿದಿದ್ದರು. ಆದರೆ ರಮ್ಯಾ ಭವಿಷ್ಯ ಸುಳ್ಳಾಗಿದೆ.
ಇವೆಲ್ಲವುಗಳ ಜೊತೆಜೊತೆಗೇ ರಮ್ಯಾಗೆ ಸೆಮಿಫೈನಲ್ ಪಂದ್ಯಾವಳಿ ಬೆಂಗಳೂರಿನಿಂದ ಮುಂಬೈಗೆ ಸ್ಥಳಾಂತರಗೊಂಡಿದ್ದಕ್ಕೂ ಸಿಕ್ಕಾಪಟ್ಟೆ ಬೇಸರವಿದೆ. ಇದೊಂದು ದುರಂತ. ಛೇ, ಹೀಗಾಗಬಾರದಿತ್ತು ಎಂದು ರಮ್ಯಾ ಹೇಳಿಕೊಂಡಿದ್ದರು.