ಡಾ.ವಿಷ್ಣುವರ್ಧನ್ ನಟನೆಯ ನಮ್ಮ ಕನ್ನಡದ ಆಪ್ತರಕ್ಷಕ ಚಿತ್ರದ ತೆಲುಗು ರಿಮೇಕ್ ಆಪ್ತರಕ್ಷಕುಡು ಚಿತ್ರಕ್ಕೂ ಸಂಗೀತ ನಿರ್ದೇಶಕರಾಗಿ ಗುರುಕಿರಣ್ ಆಯ್ಕೆಯಾಗಿದ್ದಾರೆ.
ಗುರುಕಿರಣ್ ಸಂಗೀತ ಈಗಾಗಲೇ ಮೋಡಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಮತ್ತೆ ರಿಮೇಕ್ ಅವತರಣಿಕೆಗೂ ಅವರ ಸಂಗೀತ ನಿರ್ದೇಶನವನ್ನೇ ಮುಂದುವರಿಸಲು ವಾಸು ಯೋಚಿಸಿದ್ದಾರೆ. ಆಪ್ತರಕ್ಷಕ ಚಿತ್ರದಲ್ಲಿರುವ ಗರನೆ ಗರಗರನೆ... ಹಾಗೂ ಓಂಕಾರ.... ಹಾಡುಗಳ ಟ್ಯೂನ್‌ಗಳು ತೆಲುಗಿನಲ್ಲಿಯೂ ಹಾಗೆಯೇ ಮುಂದುವರಿಯಲಿದೆ. ಉಳಿದ ಹಾಡುಗಳಿಗೆ ಮಾತ್ರ ಹೊಸದಾಗಿ ಹೊಸ ಟ್ಯೂನ್ ಹಾಕಲಾಗುವುದು ಎಂದು ಗುರುಕಿರಣ್ ತಿಳಿಸಿದ್ದಾರೆ.
ಈಗಾಗಲೇ ಆಪ್ತರಕ್ಷಕ ಭಾರೀ ಯಶಸ್ಸಿನಿಂದ ಮುನ್ನುಗ್ಗುತ್ತಿದ್ದು, ಪರಭಾಷಾ ಚಿತ್ರರಂಗವೂ ಕನ್ನಡದತ್ತ ತಿರುಗಿ ನೋಡುತ್ತಿದ್ದು, ಆಪ್ತರಕ್ಷಕದ ಬಗ್ಗೆ ಮೆಚ್ಚುಗೆ ಕೇಳಿಬರುತ್ತಿದೆ. ಹೀಗಾಗಿ ಪಿ.ವಾಸು ತೆಲುಗಿನಲ್ಲೂ ಆಪ್ತರಕ್ಷಕುಡು ಚಿತ್ರ ಮಾಡಲು ಹೊರಟಿದ್ದು, ಈಗಾಗಲೇ ವೆಂಕಟೇಶ್ ಹಾಗೂ ಅನುಷ್ಕಾ ಶೆಟ್ಟಿ ತಾರಾಗಣದ ಈ ಚಿತ್ರದಲ್ಲಿ ಕನ್ನಡದ ಅವಿನಾಶ್ ಕೂಡಾ ತಮ್ಮ ಪಾತ್ರವನ್ನು ತೆಲುಗಿನಲ್ಲೂ ಮುಂದುವರಿಸಲಿದ್ದಾರೆ. ಕನ್ನಡದಲ್ಲಿ ನಟಿಸಿದ ವಿಮಲಾ ರಾಮನ್ ಅಲ್ಲಿಯೂ ಬಣ್ಣ ಹಚ್ಚಲಿದ್ದಾರೆ.