ನಮ್ಮ ಮುಂಗಾರು ಮಳೆಯ ಯೋಗರಾಜ್ ಭಟ್ಟರು ಈಗ ಸಿಕ್ಕಾಪಟ್ಟೆ ಜೋಶ್‌ನಲ್ಲಿದ್ದಾರೆ. ತಮ್ಮ ಪಂಚರಂಗಿ ಚಿತ್ರದ ಕೆಲವು ಹಾಡುಗಳ ಚಿತ್ರೀಕರಣಕ್ಕಾಗಿ ಮತ್ತೆ ಮಂಗಳೂರಿಗೆ ತೆರಳಿದ್ದಾರೆ. ತಮ್ಮ ಚಿತ್ರತಂಡದ ಬಗ್ಗೆ ಆತ್ಮವಿಶ್ವಾಸದಿಂದ ಮಾತನಾಡುವ ಭಟ್ಟರು, ಯುವಜನರಿಗಾಗಿ ನಾನು ನನ್ನ 70ರ ವಯಸ್ಸಿನವರೆಗೂ ಸಿನಿಮಾ ನಿರ್ದೇಶನ ಮಾಡುತ್ತಲೇ ಇರುತ್ತೇನೆ ಎನ್ನುತ್ತಾರೆ. ಆಗಲೂ ಈಗಿನಂತೆ ಯುವ ಜನರ ಕೇಂದ್ರಬಿಂದುವಾಗಿಯೇ ನನ್ನ ಚಿತ್ರ ಇರಲಿದೆ ಎಂಬುದು ಭಟ್ಟರ ಮಾತು.
ಪಂಚರಂಗಿ ಚಿತ್ರತಂಡವೀಗ, ಖಂಡಿತವಾಗಿಯೂ ಈ ಚಿತ್ರ ಮುಂಗಾರು ಮಳೆಯಂತೆಯೇ ಸೂಪರ್ ಹಿಟ್ ಆಗುತ್ತೆ ಎಂದು ಆತ್ಮವಿಶ್ವಾಸದಿಂದಿದ್ದಾರಂತೆ. ಅವರ ಅನಿಸಿಕೆಯಂತೆಯೇ ಆದರೆ ಚೆನ್ನ. ಇತಿಹಾಸ ಮರುಕಳಿಸಲಿ ಎಂದೇ ಆಶಿಸುತ್ತೇನೆ ಎಂಬುದು ಭಟ್ಟರ ಆಶಯ.
ಮುಂಗಾರು ಮಳೆ, ಗಾಳಿಪಟದಲ್ಲಿ ಹಸಿರು ಸ್ವರ್ಗ ಹಾಗೂ ಮಳೆಯನ್ನೇ ತೋರಿಸಿದ್ದ ಭಟ್ಟರು ಮನಸರೆಯಲ್ಲಿ ಡಿಫರೆಂಟ್ ಆಗಿ ಕೆಂಧೂಳಿನ ಪ್ರಪಂಚವನ್ನು ಅದ್ಭುತವಾಗಿ ತೋರಿಸಿದ್ದರು. ಇದೀಗ ಮತ್ತೆ ಡಿಫರೆಂಟ್ ಆಗಿ ಪಂಚರಂಗಿಯಲ್ಲಿ ಕರಾವಳಿಯ ಬೀಚಿನ ಸೌಂದರ್ಯವ್ನನು ಚಿತ್ರದ ಮೂಲಕ ತೋರಿಸಲಿದ್ದಾರೆ. ಕನ್ನಡ ಚಿತ್ರರಂಗಲ್ಲಿ ಈವರೆಗೆ ಕಂಡುಬರದಿದ್ದ ಮಾದರಿಯಲ್ಲಿ ಕರಾವಳಿಯ ತೀರಗಳು ಪಂಚರಂಗಿಯಲ್ಲಿರಲಿವೆ ಎಂಬುದು ಸ್ವತಃ ಭಟ್ಟರ ನುಡಿ.
ಅದೇನೇ ಇರಲಿ. ಭಟ್ಟರು ಪಂಚರಂಗಿಯಲ್ಲೂ ದಿಗಂತ್ ಅವರನ್ನು ಬಿಟ್ಟಿಲ್ಲ. ಮುಂಗಾರು ಮಳೆಯ ಸಣ್ಣ ಪಾತ್ರದಿಂದ ಹಿಡಿದು ಸತತವಾಗಿ ನಾಲ್ಕು ಚಿತ್ರಗಳಲ್ಲಿ ದಿಗಂತ್ ಕೈಬಿಡದೆ ಪಂಚರಿಂಗಿಯಲ್ಲೂ ಮುಂದುವರಿಸಿದ್ದಾರೆ. ಮನಸಾರೆಯಲ್ಲಿ ದಿಗಂತ್‌ಗೆ ಸೋಲೋ ಹೀರೋ ಆಗಿಯೂ ಭಡ್ತಿ ಸಿಕ್ಕಿದೆ. ಈ ದಿಗಂತ್ ಬಗ್ಗೆ ಭಟ್ಟರಿಗೆ ಎಲ್ಲಿಲ್ಲದ ಅಕ್ಕರೆ. ಭಟ್ಟರೇ ಹೇಳುವಂತೆ, ಅಂದು ಮುಂಗಾರು ಮಳೆಯಲ್ಲಿ ಚಿಕ್ಕ ಪಾತ್ರ ನೀಡುವಾಗ ದಿಗಂತ್ ಪುಟ್ಟ ಹುಡುಗನಂತಿದ್ದ. ಥೇಟ್ ಹುಡುಗು ಬುದ್ಧಿಯಿತ್ತು. ಆದರೆ ಈಗ ದಿಗಂತ್ ತುಂಬ ಬದಲಾಗಿದ್ದಾರೆ. ಸಾಕಷ್ಟು ಮೆಚ್ಯುರಿಟಿ ಬಂದಿದೆ. ನನಗೇ ಕೆಲವೊಮ್ಮೆ ಆತನನ್ನು ನೋಡಿದರೆ ಆಶ್ಚರ್ಯವಾಗುತ್ತೆ. ಹುಡುಗ ಎಷ್ಟು ಬೆಳೆದುಬಿಟ್ಟಿದ್ದಾನಲ್ಲಾ ಅಂತ. ಹಾಗೇ ಖುಷಿಯೂ ಆಗುತ್ತೆ. ದಿಗಂತ್‌ನನ್ನು ನೋಡೋದೇ ಒಂದು ಮಜಾ ಎನ್ನುತ್ತಾರೆ ಭಟ್ಟರು.
ಹಾಗೆಯೇ ತಮ್ಮ ಚಿತ್ರದ ನಾಯಕಿ ನಟಿ ನಿಧಿ ಸುಬ್ಬಯ್ಯ ಬಗ್ಗೆಯೂ ಒಳ್ಳೆಯ ಮಾತುಗಳನ್ನಾಡುತ್ತಾರೆ ಭಟ್ಟರು. ನಿಧಿ ಅತ್ಯುತ್ತಮ ನಟಿ. ಆಕೆಯಲ್ಲಿ ಅಪಾರ ಪ್ರತಿಭೆಯಿದೆ. ಆದರೆ ಆಕೆಯ ಪ್ರತಿಭೆ ಈವರೆಗೆ ಬೆಳಕಿಗೆ ಬರುವ ಅವಕಾಶ ದಕ್ಕಿಲ್ಲ ಅಷ್ಟೆ. ಖಂಡಿತ ಆಕೆಗೆ ಉಜ್ವಲ ಭವಿಷ್ಯವಿದೆ ಎನ್ನುತ್ತಾರೆ ಭಟ್. ದಿಗಂತ್ ಹಾಗೂ ನಿಧಿ ಜೋಡಿ ಚೆನ್ನಾಗಿ ಹೊಂದಿಕೊಳ್ಳುತ್ತೆ. ಖಂಡಿತ ಪಂಚರಂಗಿ ಚಿತ್ರದಿಂದ ಅವರಿಬ್ಬರು ಭವಿಷ್ಯದ ಹಾಟ್ ಜೋಡಿಗಳಾಗುತ್ತಾರೆ. ನನಗೇ ಮತ್ತೊಮ್ಮೆ ಅವರ ಕಾಲ್‌ಶೀಟ್ ಪಡೆಯುವುದು ಕಷ್ಟವಾಗಬಹುದು ಎಂದು ಹೊಗಳುತ್ತಾರೆ ಯೋಗರಾಜ್ ಭಟ್.
ಹಾಗೆಯೇ ಭಟ್ಟರು ಮುಂಗಾರು ಮಳೆಯಿಂದೀಚೆಗೆ ಸುಧಾ ಬೆಳವಾಡಿ, ಪದ್ಮಜಾ ರಾವ್, ಅನಂತ ನಾಗ್ ಅವರನ್ನು ಬಿಟ್ಟಿಲ್ಲ. ಈ ಚಿತ್ರದಲ್ಲೂ ಬಿಟ್ಟಿಲ್ಲ. ಜನರು ಅವರನ್ನು ನನ್ನ ಚಿತ್ರಗಳಲ್ಲಿ ನೋಡಲು ಇಷ್ಟಪಡುತ್ತಾರೆ ಅದಕ್ಕೆ ಅವರ್ನನು ಬಿಟ್ಟಿಲ್ಲ ಎಂಬ ಸಮರ್ಥನೆ ಭಟ್ಟರದು. ಆದರೆ ಈ ಬಾರಿ ಮನಸಾರೆಯ ರಾಜು ತಾಳಿಕೋಟೆಯೂ ಪಂಚರಂಗಿ ತಂಡದಲ್ಲಿ ತಮ್ಮ ಹಾಸ್ಯ ಮುಂದುವರಿಸಲಿದ್ದಾರೆ.