ನಮ್ಮ ರವಿಶಂಕರ್ ಎರಡನೇ ಸಾಹಸಕ್ಕೆ ಮುಂದಾಗಿದ್ದಾರೆ. ನಂಜನಗೂಡು ನಂಜುಂಡ ಮೂಲಕ ಇವರು ಮತ್ತೊಮ್ಮೆ ಜನರ ಮುಂದೆ ಬರಲಿದ್ದಾರೆ. ನಿಜ, ಸಿಲ್ಲಿ ಲಲ್ಲಿ ಟಿವಿ ಧಾರವಾಹಿಯಲ್ಲಿ ಡಾಕ್ಟರ್ ಪಾತ್ರ ನಿರ್ವಹಿಸಿದ್ದ ಅದೇ ನಗೆ ನಟ ನಾಯಕನಾಗಿ 'ಪಯಣ' ಮಾಡಿದ್ದರು. ಚಿತ್ರ ಪರವಾಗಿಲ್ಲ, ಅನ್ನುವಷ್ಟು ಯಶಸ್ಸು ಕಂಡಿತ್ತು. ಇದೀಗ ನಂಜುಂಡನಾಗಿ ಬರುತ್ತಿದ್ದಾರೆ. ಈ ಚಿತ್ರದಲ್ಲೂ ಹಾಸ್ಯಕ್ಕೆ ಬರ ಇಲ್ಲ ಅನ್ನಬಹುದು.
ಒಬ್ಬ ಅನುಮಾನಾಸ್ಪದ ವ್ಯಕ್ತಿಯ ಜತೆ ಬಾಳುವ ಸುಂದರ ಹೆಂಡತಿಯ ಪಾಡಿನ ಕಥೆ ಇದು. ಹೆಜ್ಜೆ ಹೆಜ್ಜೆಗೂ ಅನುಮಾನಿಸುವ ಪತಿಯನ್ನು ಸಂಭಾಳಿಸುವಲ್ಲಿ ಆಕೆ ಪಡುವ ಪಾಡು, ನಾಯಕ ಅನುಭವಿಸುವ ಸಂಕಟ, ಅನುಮಾನದ ಭೂತ ಬೆನ್ನೇರಿ ಪಡುವ ಸಂಕಟ ಎಲ್ಲವನ್ನೂ ಉತ್ತಮವಾಗಿ ತೋರಿಸುವ ಯತ್ನ ಚಿತ್ರದಲ್ಲಿ ಮಾಡಲಾಗಿದೆಯಂತೆ. ಇದರಿಂದ ಆಗುವ ಅನಾಹುತಗಳು ಏನು, ಚಿತ್ರದಲ್ಲಿ ನಾಯಕಿ ನಾಯಕನ ಜತೆ ಹೇಗೆ ಬಾಳುತ್ತಾಳೆ, ಬಿಟ್ಟು ಹೋಗುತ್ತಾಳಾ? ಮತ್ತೆ ಬರುತ್ತಾಳಾ? ಎಂಬೆಲ್ಲಾ ಕುತೂಹಲ ಮೂಡುವುದು ಸಹಜ. ಅದಕ್ಕೆಲ್ಲಾ ಚಿತ್ರ ಬಿಡುಗಡೆ ಆದ ನಂತರವೇ ಉತ್ತರ ಸಿಗಬಲ್ಲದು. ಚಿತ್ರದಲ್ಲಿ 5 ಹಾಡುಗಳು ಇದ್ದು, ಐವರು ಗಾಯಕರು ಹಾಡಿದ್ದಾರೆ. ಮಲಯಾಳಿ ಚೆಲುವೆ ಹಂಸಿಣಿ ಈ ಚಿತ್ರದ ನಾಯಕಿ.
ನಿರ್ದೇಶಕ ಶ್ರೀನಿವಾಸ್ ಪ್ರಸಾದ್‌ಗೆ ಇದೊಂದು ಸವಾಲಿನ ಚಿತ್ರ. ಅದನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಒಟ್ಟಾರೆ ಸಿಲ್ಲಿಲಲ್ಲಿ ಡಾಕ್ಟರ್ ಹಾಸ್ಯತಂಡದೊಂದಿಗೆ ನಡೆಸಿದ 'ಪಯಣ'ದ ಅಲೆಯಲ್ಲೇ ನಂಜನಗೂಡು ನಂಜುಂಡ ಆಗಿದ್ದಾರೆ. ಇದನ್ನೂ ಜನ ಒಪ್ಪಿಕೊಳ್ಳುವರಾ ಅನ್ನುವುದನ್ನು ಚಿತ್ರ ಬಿಡುಗಡೆ ಆದ ನಂತರ ನೋಡಬೇಕು.