ಕನ್ನಡಕ್ಕೊಬ್ಬ ನಾಯಕ ಬರುತ್ತಿದ್ದಾನೆ. ಇದೇನು ಕನ್ನಡದಲ್ಲಿ ನಾಯಕರಿಲ್ಲವೇ? ಎಂದು ಕೇಳಬೇಡಿ. ಯಾಕೆಂದರೆ, ಇದರರ್ಥ ನಾಯಕ ಹೆಸರಿನ ಚಿತ್ರ ಬರುತ್ತಿದೆ ಎಂಬುದು. ನಿರ್ದೇಶಕ ಪಿ.ಸಿ.ಶೇಖರ್ ಬಹು ನಿರೀಕ್ಷೆಯಿಂದ ಸಿದ್ಧಪಡಿಸಿರುವ ಈ ಚಿತ್ರ ಮುಹೂರ್ತ ಕಂಡು ವರ್ಷ ಕಳೆದಿದೆ. ಹೆಚ್ಚಿನ ಪಾಲು ಶೂಟಿಂಗ್ ಮುಗಿದೇ ಹೋಗಿದೆ. ಮುಂದಿನ ತಿಂಗಳು ತೆರೆಕಾಣುವ ನಿರೀಕ್ಷೆಯಲ್ಲಿದೆ.
ನಾಯಕ ನಟರಾಗಿ ನವೀನ್ ಎಂಬ ಹೊಸ ಹುಡುಗನನ್ನು ಆಯ್ಕೆ ಮಾಡಲಾಗಿದೆ. 6.2 ಅಡಿ ಎತ್ತರ ಇರುವ ಈ ನೀಳಕಾಯದ ಯುವಕನಿಗೆ ನಾಯಕಿಯಾಗಿ ರಾಗಿಣಿ ನಟಿಸಿದ್ದಾರೆ. ಅದೇ, ವೀರ ಮದಕರಿಯಲ್ಲಿ `ಜುಂ ಜುಂ ಮಾಯಾ...' ಎನ್ನುತ್ತ ಕುಣಿದಿದ್ದಾಳಲ್ಲಾ, ಅದೇ ರಾಗಿಣಿ.
ನಟ ನವೀನ್ ಸಾಫ್ಟ್‌ವೇರ್ ಎಂಜಿನಿಯರ್. ಚಿತ್ರರಂಗದ ಸೆಳೆತ ಎಷ್ಟಿರುತ್ತದೆ ಎಂದರೆ, ಶೇಖರ್ ಆಫರ್ ನೀಡುತ್ತಿದ್ದಂತೆ, ಎಲ್ಲವನ್ನೂ ಬಿಟ್ಟು ಓಡಿ ಬಂದಿದ್ದಾರೆ ನವೀನ್. ಮೂಲತಃ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಶೇಖರ್, ಆಗಾಗ ಹವ್ಯಾಸಕ್ಕೆ ಚಿತ್ರಗಳನ್ನು ನಿರ್ದೇಶಿಸುತ್ತಿರುತ್ತಾರೆ.
ಹೌದು. ಚಿತ್ರದ ಹೆಸರೇ ಹೇಳುವಂತೆ ನಾಯಕ ಪ್ರಧಾನ ಚಿತ್ರ ಇದು. ಒಂದು ವ್ಯವಸ್ಥೆಗೆ, ಒಂದು ಪ್ರೀತಿಗೆ, ಒಂದು ನಿಯತ್ತಿಗೆ, ಒಂದು ವಿಷಯಕ್ಕೆ ಬದ್ಧನಾಗಿರುವ ನಟ ಅದನ್ನು ಜೀವನ ಪರ್ಯಂತ ಹೇಗೆ ನಿಭಾಯಿಸಿಕೊಂಡು ಹೋಗುತ್ತಾನೆ. ಎಷ್ಟೇ ಕಷ್ಟ ಬಂದರೂ ಎದೆಗುಂದದೇ ಹೇಗೆ ಮುಂದುವರಿಸಿಕೊಂಡು ಹೋಗುತ್ತಾನೆ ಎಂಬಿತ್ಯಾದಿ ವಿಷಯಗಳನ್ನು ಇಲ್ಲಿ ಪ್ರಧಾನವಾಗಿ ಚಿತ್ರಿಸಲಾಗಿದೆಯಂತೆ. 'ಬಿರುಗಾಳಿ' ಅರ್ಜುನ್ ಸಂಗೀತವಿದ್ದು, ಐದು ಹಾಡುಗಳಿವೆ. ನಾಯಕನಿಗೆ ಸ್ವಾಗತ.