ನಮ್ಮ ಎಂ.ಎಸ್. ಸತ್ಯು ಬಹು ಸುದೀರ್ಘ ವಿರಾಮದ ನಂತರ ಮತ್ತೆ ಇಜ್ಜೋಡು ಹಿಡಿದು ಚಿತ್ರರಂಗಕ್ಕೆ ಮರಳಿದ್ದಾರೆ. ಅತ್ಯುತ್ತಮ ಕೆಲಸಕ್ಕೆ ಹೆಸರಾಗಿರುವ ಸತ್ಯು, ತಮ್ಮ ಚಿತ್ರದ ನಿರ್ವಹಣೆಯಲ್ಲಿ ಎಲ್ಲೂ ಎಡವಿದವರಲ್ಲ. ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿಕೊಂಡು ಹೋಗುತ್ತಾರೆ. ಜನ ಮೆಚ್ಚುವ ಹತ್ತಾರು ಚಿತ್ರವನ್ನು ನೀಡಿರುವ ಇವರು ಬಹು ದೀರ್ಘ ಅವಧಿಯ ತಪಸ್ಸಿನ ನಂತರ ಒಂದು ಉತ್ತಮ ಚಿತ್ರದೊಂದಿಗೆ ಮರಳಿದ್ದಾರೆ.
ಹೌದು. ದೇವದಾಸಿ ಪದ್ಧತಿಯ ಸುಳಿಯಲ್ಲಿ ಸಿಕ್ಕ ನಾಯಕಿಯನ್ನು ಅಕಸ್ಮಾತ್ ಸಂದರ್ಶಿಸುವ ನಾಯಕ ಆಕೆಯನ್ನು ಆ ವಿಷವರ್ತುಲದಿಂದ ಹೇಗೆ ಆಚೆ ತರುತ್ತಾನೆ ಎನ್ನುವುದೇ ಚಿತ್ರದ ಕಥಾ ವಸ್ತು. ನಾಯಕರಾಗಿ ಅನಿರುದ್ಧ್ ನಟಿಸುತ್ತಿದ್ದಾರೆ. ಇದರಲ್ಲಿ ಇವರದ್ದು ಒಬ್ಬ ಛಾಯಾಗ್ರಾಹಕನ ಪಾತ್ರ. ಬಹು ಸಮಯದಿಂದ ಒಂದು ಬ್ರೇಕ್‍ಗಾಗಿ ಕಾಯುತ್ತಿರುವ ಅನಿರುದ್ಧ್‌ಗೆ ಈ ಚಿತ್ರ ಆ ಅವಕಾಶ ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಮೌರ್ಯ ಹಾಗೂ ಅರಸು ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಮೀರಾ ಜಾಸ್ಮಿನ್ ಈ ಚಿತ್ರದ ನಾಯಕಿ.
ಗಂಡು ಹೆಣ್ಣೆನ ನಡುವಿನ ಆಕರ್ಷಣೆಯನ್ನು ಇಡೀ ಚಿತ್ರದಲ್ಲಿ ಅತ್ಯುತ್ತಮವಾಗಿ ಚಿತ್ರಿಸಲಾಗಿದೆಯಂತೆ. ಒಟ್ಟಾರೆ 12 ವರ್ಷಗಳ ದೀರ್ಘ ಅವಧಿಯ ವಿರಾಮದ ನಂತರ ಸತ್ಯು ಮರಳಿದ್ದಾರೆ. ಇನ್ನೆರಡು ಕಳೆದಿದ್ದರೆ ವನವಾಸ ಆಗುತ್ತಿತ್ತಲ್ಲ ಅನ್ನುತ್ತಿದ್ದಾರೆ ಸ್ಯಾಂಡಲ್‌ವುಡ್ ಜನ.
ಚಿತ್ರದಲ್ಲಿ ಎರಡು ಹಾಡುಗಳಿದ್ದು, ಮಣಿಕಾಂತ್ ಕದ್ರಿ ವಿಭಿನ್ನ ಶೈಲಿಯಲ್ಲಿ ಸಂಗೀತ ನೀಡಿದ್ದಾರೆ. ಏಪ್ರಿಲ್ 30ರಂದು ಚಿತ್ರ ತೆರೆಕಾಣುವ ನಿರೀಕ್ಷೆ ಇದೆ. ರಿಲಯನ್ಸ್ ಸಂಸ್ಥೆ ಸಹ ಈ ಚಿತ್ರದ ನಿರ್ಮಾಣ ಹೊಣೆ ಹೊತ್ತಿದ್ದು, ಈ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದೆ.