ನಮ್ಮ ಪ್ರೀತಿಯ ರಮೇಶ್ ಇನ್ನೊಂದು ಮಹತ್ವದ ಚಿತ್ರಕ್ಕೆ ಮುಂದಾಗಿದ್ದಾರೆ. ಇವರ ಚಿತ್ರ ಅಂದರೆ ಜನ ನಿರೀಕ್ಷೆ ಇರಿಸಿಕೊಳ್ಳುವುದು ತಪ್ಪಲ್ಲ. ಸಾಕಷ್ಟು ಕುತೂಹಲ, ಸಂತೋಷ, ಮೋಜು ಮಸ್ತಿಯನ್ನು ಒಳಗೊಂಡಿರುವ ಇವರ ಚಿತ್ರ ಸದಾ ನೋಡುಗರ ಮನ ಸೆಳೆಯುತ್ತದೆ.
ಸಕುಟುಂಬ ಸಪರಿವಾರ ಸಮೇತರಾಗಿ ಸಾಗಿ ವೀಕ್ಷಿಸಬಹುದಾದ ಚಿತ್ರವನ್ನು ರಮೇಶ್ ಮಾಡುತ್ತಾರೆ. ಇಲ್ಲಿ ನಗು, ನೋವು, ನಲಿವು, ಉತ್ತಮ ಸಂಗೀತ, ಹಾಡು ಹಾಗೂ ಸಂದೇಶ ನೀಡುವಲ್ಲಿ ಕೊರತೆ ಆಗುವುದಿಲ್ಲ. ಚಿತ್ರ ಒಂದನ್ನು ನೋಡಿ ಸುಮ್ಮನೆ ಮನೆಗೆ ತೆರಳಲು ಇವರು ಬಿಡುವುದಿಲ್ಲ. ಒಂದಲ್ಲ ಒಂದು ಬದಲಾವಣೆಗೆ ಅನುಕೂಲ ಆಗುವ ಸಲಹೆ ನೀಡಿ ಕಳುಹಿಸುತ್ತಾರೆ. ಇದರಿಂದಲೇ ಇವರ ಚಿತ್ರಗಳು ಗೆಲ್ಲುತ್ತಿರುವುದು. ಜನ ಅಪಾರವಾಗಿ ಇವರ ಚಿತ್ರವನ್ನು ಮೆಚ್ಚಿಕೊಳ್ಳುತ್ತಲೂ ಇದ್ದಾರೆ.
ಇದೀಗ ಎಲ್ಲೆಡೆ ಏನಿದ್ದರೂ ಇಂಟರ್ನೆಟ್ ಕಾಲ. ಅದರಲ್ಲಿ ಬರುವ ಅಂಶವನ್ನೇ ಚಿತ್ರದ ಕಥಾವಸ್ತುವಾಗಿ ಇರಿಸಿಕೊಂಡು ಸಿನಿಮಾ ನಿರ್ಮಿಸಿದ್ದಾರೆ ರಮೇಶ್. ಅಂತರ್ಜಾಲದ ಮೂಲಕ ಹುಡುಗಿಯನ್ನು ಪರಿಚಯ ಮಾಡಿಕೊಂಡು ಆ ಮೂಲಕವೇ ಪ್ರೀತಿಸುವ ಕಥಾ ವಸ್ತು ಚಿತ್ರದ್ದು.
ಚಿತ್ರದ ನಾಯಕ ರಮೇಶ್ ಒಬ್ಬ ಸಾಫ್ಟ್‌ವೇರ್ ಎಂಜಿನಿಯರ್. ಇಂಟರ್ನೆಟ್‌ನಲ್ಲಿ ಸಿಗುವ ಹುಡುಗಿಯನ್ನು ಪ್ರೇಮಿಸುವ ನಾಯಕ ಅತ್ಯಂತ ಮೃದು ಸ್ವಭಾವದ ಹುಡುಗ. ರಮೇಶ್ ತಮಗೆ ಬೇಕಾದ, ಸರಿ ಹೊಂದುವ ಪಾತ್ರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ಇಬ್ಬರು ನಟಿಯರಿದ್ದು ಒಬ್ಬರು ರಮಣೀತೋ ಚೌಧರಿ. ನಿರ್ದೇಶಕರಿಗೂ ಇದೊಂದು ಹೊಸ ಚಿತ್ರವಾಗಿದ್ದು, ಸವಾಲನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂದು ಕಾದು ನೋಡಬೇಕಿದೆ. ಅಂದಹಾಗೆ ಚಿತ್ರದ ಹೆಸರು 'ಪ್ರೀತಿಯಿಂದ ರಮೇಶ್'.