ಇಂದು (ಏ.24) ಕನ್ನಡದ ಮೇರು ನಟ, ನಟಸಾರ್ವಭೌಮ, ಕಲಾಕೌಸ್ತುಭ, ಮೇಲಾಗಿ ನಮ್ಮೆಲ್ಲರ ಅಣ್ಣಾವ್ರು ಡಾ.ರಾಜ್ ಅವರ 82ನೇ ಹುಟ್ಟುಹಬ್ಬ. ಡಾ.ರಾಜ್ ಅವರ ಮರಣಾ ನಂತರ ಇದು ಐದನೇ ಹುಟ್ಟುಹಬ್ಬ.
1929ನೇ ಏಪ್ರಿಲ್ 24ರಂದು ಜನಿಸಿದ ಡಾ.ರಾಜ್ ಹೆಸರೇ ಹಾಗೆ ಎಂಥಾದ್ದೋ ಒಂದು ಸೆಳೆತ. ಕನ್ನಡಕ್ಕೊಂದು ಹೆಮ್ಮೆ ತಂದುಕೊಟ್ಟ ನಟ. 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ನಟ ಸಾರ್ವಭೌಮ ಎನಿಸಿದವರು. ಕನ್ನಡಕ್ಕೆ ವರನಟರಾದವರು. ಎಷ್ಟೇ ಅವಕಾಶಗಳು ಹುಡುಕಿ ಬಂದರೂ ಬೇರೆ ಭಾಷೆಯೆಡೆಗೆ ಮನಸ್ಸು ಮಾಡದವರು. ತಮ್ಮ ಅತ್ಯಧ್ಬುತ ಕಂಠಸಿರಿ, ಸುಲಲಿತ ಆಕರ್ಷಕ ಸ್ಪಷ್ಟ ಕನ್ನಡ ಭಾಷೆ, ಪಾತ್ರದೊಳಗೆ ಹೊಕ್ಕು ಜೀವ ತುಂಬುವ ನಟನೆ ಡಾ.ರಾಜ್ ಅವರನ್ನು ಮೇರು ನಟನನ್ನಾಗಿಸಿತು. ಇಂತಿಪ್ಪ ರಾಜ್ ಇಲ್ಲವಾಗಿ ಇದೀಗ ನಾಲ್ಕು ವರುಷಗಳೇ ಸಂದಿವೆ.
ಬೇಡರ ಕಣ್ಣಪ್ಪ, ಭೂಕೈಲಾಸ, ಅಣ್ಣ ತಂಗಿ, ರಣದೀರ ಕಂಠೀರವ, ಕೈವಾರ ಮಹಾತ್ಮೆ, ಗಾಳಿಗೋಪುರ, ಮಹಾತ್ಮ ಕಬೀರ್, ಸ್ವರ್ಣಗೌರಿ, ವಿಧಿವಿಲಾಸ, ವೀರಕೇಸರಿ, ಸಂತ ತುಕಾರಾಮ್, ಚಂದವಳ್ಳಿಯ ತೋಟ, ತುಂಬಿದ ಕೊಡ, ಚಂದ್ರಹಾಸ, ಸತ್ಯ ಹರಿಶ್ಚಂದ್ರ, ಬೆಟ್ಟದ ಹುಲಿ, ಸತಿ ಸಾವಿತ್ರಿ, ಮಂತ್ರಾಲಯ ಮಹಾತ್ಮೆ, ತೂಗುದೀಪ, ಎಮ್ಮೆ ತಮ್ಮಣ್ಣ, ಪಾರ್ವತಿ ಕಲ್ಯಾಣ, ದೇವರ ಗೆದ್ದ ಮಾನವ, ನಟ ಸಾರ್ವಭೌಮ, ರೌಡಿ ರಂಗಣ್ಣ, ಧೂಮಕೇತು, ಸಿಂಹಸ್ವಪ್ನ, ಭಾಗ್ಯದ ಬಾಗಿಲು, ಚೂರಿ ಚಿಕ್ಕಣ್ಣ, ಮೇಯರ್ ಮುತ್ತಣ್ಣ, ಕರುಳಿನ ಕರೆ, ಶ್ರೀಕೃಷ್ಣದೇವರಾಯ, ಮಿಸ್ಟರ್ ರಾಜ್ ಕುಮಾರ್, ಬಾಳು ಬೆಳಗಿತು, ಸಿಐಡಿ ರಾಜಣ್ಣ, ಪರೋಪಕಾರಿ, ಬಾಳು ಬೆಳಗಿತು, ದೇವರ ಮಕ್ಕಳು, ಕಸ್ತೂರಿ ನಿವಾಸ, ನಮ್ಮ ಸಂಸಾರ, ತಾಯಿ ದೇವರು, ಕಾಸಿದ್ರೆ ಕೈಲಾಸ, ಸಾಕ್ಷಾತ್ಕಾರ, ಸಿಪಾಯಿ ರಾಮು, ಬಂಗಾರದ ಮನುಷ್ಯ, ನಂದ ಗೋಕುಲ, ಜಗ ಮೆಚ್ಚಿದ ಮಗ, ಗಂಧದ ಗುಡಿ, ದೂರದ ಬೆಟ್ಟ, ಬಂಗಾರದ ಪಂಜರ, ಎರಡು ಕನಸು, ಸಂಪತ್ತಿಗೆ ಸವಾಲ್, ದಾರಿ ತಪ್ಪಿದ ಮಗ, ಭಕ್ತ ಕುಂಬಾರ, ಪ್ರೇಮದ ಕಾಣಿಕೆ, ಬಹುದ್ದೂರ್ ಗಂಡು, ರಾಜ ನನ್ನ ರಾಜ, ನಾ ನಿನ್ನ ಮರೆಯಲಾರೆ, ಸನಾದಿ ಅಪ್ಪಣ್ಣ, ಬಬ್ರುವಾಹನ, ಗಿರಿಕನ್ಯೆ, ಭಾಗ್ಯವಂತರು, ಹುಲಿಯ ಹಾಲಿನ ಮೇವು, ತಾಯಿಗೆ ತಕ್ಕ ಮಗ, ಬಡವರ ಬಂಧು, ವಸಂತಗೀತ, ಹೊಸಬೆಳಕು, ಹಾಲು ಜೇನು, ಚಲಿಸುವ ಮೋಡಗಳು, ದೇವತಾ ಮನುಷ್ಯ, ಎರಡು ನಕ್ಷತ್ರಗಳು, ಜ್ವಾಲಾಮುಖಿ, ಅನುರಾಗ ಅರಳಿತು, ಒಂದು ಮುತ್ತಿನ ಕಥೆ, ಜೀವನಚೈತ್ರ, ಆಕಸ್ಮಿಕ, ಒಡಹುಟ್ಟಿದವರು, ಶಬ್ದವೇಧಿ...... ಹೀಗೆ ಒಂದೇ ಎರಡೇ.. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಸಾರ್ವಭೌಮನಾಗಿಯೇ ಮಿಂಚಿದವರು. ನಿಜ ಜೀವನದಲ್ಲಿಯೂ ಮುತ್ತಾಗಿಯೇ ಅರಳಿದವರು ನಿಜ್ಕಕೂ ಡಾ.ರಾಜ್.
ತಮ್ಮ ಚಿತ್ರಗಳಂತೆಯೇ ಡಾ.ರಾಜ್ ನಿಜಕ್ಕೂ ಮತ್ತೊಬ್ಬರಿಗೆ ಸ್ಪೂರ್ತಿಯಾಗಿ ಬಾಳಿದವರು. ವೀರಪ್ಪನ್ ಅಪಹರಣ ಡಾ.ರಾಜ್ ಬದುಕಿನಲ್ಲಿ ದುರಂತಮಯ ಘಟನೆಯಾದರೂ, ಸ್ಪತಃ ವೀರಪ್ಪನ್‌ನಂತಹ ಕಟುಕನನ್ನೂ ಚಕಿತಗೊಳಿಸುವಂತೆ ಬದುಕಿದವರು ಡಾ.ರಾಜ್. ಅಂತಹ ವ್ಯಕ್ತಿತ್ವ ಅವರದ್ದು. ಕನ್ನಡ ಎಂದರೆ ಡಾ.ರಾಜ್, ಡಾ.ರಾಜ್ ಎಂದರೆ ಕನ್ನಡ ಎಂಬಂತೆ ಮೇಳೈಸಿದವರು ಡಾ.ರಾಜ್. ಕೋಟಿ ಕೋಟಿ ಕನ್ನಡಿಗರಿಗೆ ಕನ್ನಡಾಭಿಮಾನದ ಸಂಕೇತ ಡಾ.ರಾಜ್. ಕನ್ನಡ ಪರವಾಗಿ ಗೋಕಾಕ್ ಚಳುವಳಿಗೂ ಧುಮುಕಿ ಹೋರಾಟಕ್ಕೆ ಜೀವ ತುಂಬಿದ ರಾಜ್ ತಮಗೆ ಸಾಧ್ಯವಿದ್ದರೂ, ಎಂದಿಗೂ ರಾಜಕಾರಣದಿಂದ ದೂರ ಉಳಿದವರು. ಜನಪ್ರಿಯ ಮಾಧ್ಯಮವಾದ ಸಿನಿಮಾ ಮಾಧ್ಯಮದ ಮೂಲಕ ಹಲವು ದಶಕಗಳ ಕಾಲ ಅಕ್ಷರಶಃ ಮಿಂಚಿದವರು ಡಾ.ರಾಜ್.
ಅಭಿನಯಕ್ಕಾಗಿ ವಿಶ್ವವಿದ್ಯಾನಿಲಯವೊಂದರಿಂದ (ಮೈಸೂರು ವಿವಿ) ಗೌರವ ಡಾಕ್ಟರೇಟ್ ಪಡೆದ ಮೊದಲ ಭಾರತೀಯ ನಟ ಡಾ.ರಾಜ್. ಅಮೆರಿಕ ಸಂಯುಕ್ತ ಸಂಸ್ಥಾನದ ಕೆಂಟುಕಿಯಿಂದ ಕೆಂಟುಕಿ ಕರ್ನಲ್ ಪ್ರಶಸ್ತಿ ಪಡೆದ ಏಕೈಕ ಭಾರತೀಯ ನಟ, 50 ವರ್ಷಗಳ ಕಾಲ ಏಕೈಕ ಭಾಷೆಯೊಂದರ ಚಿತ್ರಗಳಲ್ಲೇ ನಟಿಸಿದ ಏಕೈಕ ಭಾರತೀಯ ನಟ, ನಟನೊಬ್ಬ ಬದುಕಿದ್ದಾಗಲೇ ರಾಜ್ಯ ಸರ್ಕಾರವೊಂದು ಆತನ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವ ಮೊದಲ ನಟ, 5,000ಕ್ಕೂ ಹೆಚ್ಚು ಅಭಿಮಾನಿ ಸಂಘಗಳನ್ನು ಹೊಂದಿರುವ ಏಕೈಕ ಭಾರತೀಯ ನಟ, ಹಿನ್ನೆಲೆ ಸಂಗೀತ ಹಾಗೂ ನಟನೆ ಎರಡಕ್ಕೂ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ನಟ.. ಹೀಗೆ ಹತ್ತು ಹಲವು ಪ್ರಥಮಗಳ ಸರದಾರನೂ ಈ ನಮ್ಮ ಅಣ್ಣಾವ್ರು. ಡಾ.ರಾಜ್ ಅವರ ಮೊದಲ ಚಿತ್ರವೇ ಅತ್ಯುತ್ತಮ ಚಿತ್ರ ಎಂಬ ರಾಷ್ಟ್ರಪ್ರಶಸ್ತಿಗೆ ಭಾಜನವಾಯಿತು. ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಪಡೆದ ಏಕೈಕ ಕನ್ನಡಿಗ ನಟನೂ ಡಾ.ರಾಜ್. ಅಲ್ಲದೆ, ದಕ್ಷಿಣ ಭಾರತದಲ್ಲಿ ನಟನೆಗಾಗಿ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಪಡೆದ ಮೂವರಲ್ಲಿ ಎರಡನೆಯವರು ಡಾ.ರಾಜ್.
10ಕ್ಕೂ ಹೆಚ್ಚು ಬಿರುದುಗಳನ್ನು ಪಡೆದ ನಟರೊಬ್ಬರೇ ಈ ಡಾ.ರಾಜ್. ಭಾರತ ಸರ್ಕಾರದಿಂದ ಪದ್ಮಭೂಷಣ, ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ, 10 ಬಾರಿ ಫಿಲಂಫೇರ್ ಪ್ರಶಸ್ತಿ, ಒಂಬತ್ತು ಬಾರಿ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ, 100ನೇ ಚಿತ್ರದ ಸಂದರ್ಭದಲ್ಲಿ ನಟ ಸಾರ್ವಭೌಮ ಬಿರುದು, ಅಭಿಮಾನಿ ಸಂಘಗಳಿಂದ ಗಾನ ಗಂಧರ್ವ ಬಿರುದು, ಪತ್ರಕರ್ತರು ಹಾಗೂ ಅಭಿಮಾನಿಗಳಿಂದ ವರನಟ, ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್ ಬಿರುದು, ಅಭಿಮಾನಿಗಳಿಂದ ಅಣ್ಣಾವ್ರು ಬಿರುದು, ಅಭಿಮಾನಿಗಳಿಂದ ರಸಿಕರ ರಾಜ, ಅಭಿಮಾನಿಗಳಿಂದ ಕನ್ನಡದ ಕಣ್ಮಣಿ, ಅಭಿಮಾನಿಗಳಿಂದ ಮೇರು ನಟ, ಕರ್ನಾಟಕ ಸರ್ಕಾರದಿಂದ ನಾಡೋಜ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ರಾಜ್ಯ ಸರ್ಕಾರದಿಂದಲೇ ಕಲಾ ಕೌಸ್ತುಭ ಬಿರುದು ಹೀಗೆ ಲೆಕ್ಕವಿಲ್ಲದಷ್ಟು ಬಿರುದು, ಸನ್ಮಾನ ಪ್ರಶಸ್ತಿ ಪಡೆದ ನಟ ಡಾ.ರಾಜ್.
ತಮ್ಮ ಅಂತಿಮ ದಿನದವರೆಗೂ ಯೋಗ, ಧ್ಯಾನ ಹೀಗೆ ತಮ್ಮ ದಿನಚರಿಗಳಲ್ಲಿ ಸಕ್ರಿಯವಾಗಿದ್ದ ಡಾ.ರಾಜ್, ಎದೆನೋವಿನಿಂದ 2006ರ ಏ.12ರಂದು ತಮ್ಮ ಮನೆಯಲ್ಲೇ ಕೊನೆಯುಸಿರೆಳೆದರು. ಅವರ ಇಚ್ಛೆಯಂತೆಯೇ ಅವರ ಕಣ್ಣುಗಳ್ನನು ನಾರಾಯಣ ನೇತ್ರಾಲಯಕ್ಕೆ ದಾನವಾಗಿ ನಡಲಾಯಿತು. ಇದು ಎಷ್ಟೋ ಅಭಿಮಾನಿಗಳಿಗೆ ನೇತ್ರದಾನಕ್ಕೆ ಪ್ರೇರಣೆಯಾಯಿತು. ರಾಜ್ ಅಂತಿಮ ಯಾತ್ರೆಯಲ್ಲಿ ಅಪಾರ ಸಂಖ್ಯೆಯ ನೂಕು ನುಗ್ಗಲು, ಅಭಿಮಾನಿಗಳ ರೋದನ ಮುಗಿಲು ಮುಟ್ಟಿತ್ತು. ಆದರೆ ಎಂದೂ ಶಾಂತಿಪ್ರಿಯರಾಗಿದ್ದ ಡಾ.ರಾಜ್ ನಿಧನದ ಅಂತಿಮ ಯಾತ್ರೆಯಲ್ಲಿ ಭಾರೀ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಿ ಗೋಲೀಬಾರ್ ನಡೆಯಿತು. ಹಲವು ಗಾಯಗೊಂಡರೆ, ಹಲವರು ಸಾವಿಗೆ ಶರಣಾದರು.
ಇಂದು ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್ ಸಮಾಧಿಯಲ್ಲಿ ಅಸಂಖ್ಯಾತ ಅಭಿಮಾನಿ ವರ್ಗ ನೆರೆದು ಡಾ.ರಾಜ್ ಅವರಿಗೆ ಭಾವಪೂರ್ಣ ನಮನ ಸಲ್ಲಿಸಿದರು. ಡಾ.ರಾಜ್ ಕುಟುಂಬ ವರ್ಗವೂ ಸಮಾಧಿಗೆ ಭೇಟಿ ನೀಡಿ ಪೂಜೆ ನೆರವೇರಿಸಿದರು. ಇಂತಹ ನಮ್ಮ ಹೆಮ್ಮೆಯ ಕನ್ನಡದ ಅಣ್ಣಾವ್ರಿಗೆ, ಬಂಗಾರದ ಮನುಷ್ಯನಿಗೆ ನಮ್ಮದೂ ಶತಕೋಟಿ ನಮನ.