ನಮ್ಮ ಕುಳ್ಳ ದ್ವಾರಕೀಶ್ ಇನ್ನೊಂದು ಚಿತ್ರ ನಿರ್ಮಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. 72ರ ಹರೆಯದಲ್ಲಿರುವ ದ್ವಾರಕೀಶ್ ಚಿತ್ರ ನಿರ್ಮಾಣದ ಕನಸನ್ನು ನಿಜಕ್ಕೂ ಮೆಚ್ಚಲೇ ಬೇಕು. ನೀ ಬರೆದ ಕಾದಂಬರಿ ಮೂಲಕ ಚಿತ್ರರಂಗಕ್ಕೆ ಕಾಲಿರಿಸಿದ ದ್ವಾರಕೀಶ್ ಚಿತ್ರರಂಗದಲ್ಲಿ ಸಾಕಷ್ಟು ಏಳು-ಬೀಳುಗಳ ನಡುವೆಯೂ ಮುಂದೆ ಮುಂದೆ ಸಾಗುತ್ತಿದ್ದಾರೆ. ಎದ್ದಾಗ ಮೈ ಮರೆಯದೇ, ಬಿದ್ದಾಗ ಎದೆಗುಂದದೇ ಮುಂದೆ ಸಾಗಿದ್ದಾರೆ.
ಜೀವನ ಗೆಳೆಯ ವಿಷ್ಣುವರ್ಧನ್ ಜತೆ ಸರಸ- ವಿರಸಗಳ ಮೂಲಕ ಹೆಸರಾಗಿದ್ದ ದ್ವಾರಕೀಶ್, ಮಕ್ಕಳನ್ನು ಚಿತ್ರರಂಗಕ್ಕೆ ತಂದು ಗಟ್ಟಿಗೊಳಿಸಲು ನಡೆಸದ ಸಾಹಸವಿಲ್ಲ. ಎರಡು ಮೂರು ಚಿತ್ರವನ್ನು ಮಾಡಿ ಸೋತಿದ್ದಾರೆ. ಇಳಿವಯಸ್ಸಿನಲ್ಲಿ ಅವರ ಚಿತ್ರ ನೋಡಿದಷ್ಟು ಮಂದಿಯೂ ಅವರ ಮಕ್ಕಳ ಚಿತ್ರ ನೋಡಲು ಆಸಕ್ತಿ ತೋರಿಸುತ್ತಿಲ್ಲ.
ಚಿತ್ರರಂಗದ ಎಲ್ಲಾ ಆಯಾಮಗಳಲ್ಲೂ ಕೆಲಸ ನಿರ್ವಹಿಸಿರುವ ದ್ವಾರಕೀಶ್, ಸುಮ್ಮನೆ ಕೂರುವ ಜಾಯಮಾನದವರಲ್ಲ. ಇದೀಗ ಮತ್ತೊಂದು ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಸದಾ ಸಿನಿಮಾ ಧ್ಯಾನದಲ್ಲೇ ಇರುವ ಇವರು ನಿರ್ಮಿಸಿದ ಮೊದಲ ಚಿತ್ರ ಮೇಯರ್ ಮುತ್ತಣ್ಣ. ದ್ವಾರಕೀಶ್ ಅವರ ನಿರ್ಮಾಣದ ಆಪ್ತಮಿತ್ರ ಚಿತ್ರ ಕೂಡಾ ಭರ್ಜರಿ ಯಶಸ್ಸು ಕಂಡಿತ್ತು. ಆದರೆ, ಈಗ ಚಾಲನೆ ಪಡೆದಿರುವ ಚಿತ್ರದ ಸಂಪೂರ್ಣ ವಿವರ ಇನ್ನೂ ಸಿಕ್ಕಿಲ್ಲ. ನಟ- ನಟಿಯರ ಆಯ್ಕೆ ಆಗಬೇಕಿದೆ. ಎಲ್ಲವೂ ಅಚ್ಚುಕಟ್ಟಾಗಿ ಮಾಡುವ ಇರಾದೆ ದ್ವಾರಕೀಶ್ ಅವರದ್ದು.