ಡಾ. ರಾಜ್ ಕುಮಾರ್‌ಗೆ ನಾಟಿ ಕೋಳಿ ಸಾರು, ರಾಗಿ ಮುದ್ದೆ ಅಂದರೆ ಬಲೇ ಇಷ್ಟವಾಗಿತ್ತಂತೆ. ಹಾಗಂತ ಅವರು ಎಲ್ಲೆಂದರಲ್ಲಿ ಅದನ್ನು ತಿನ್ನುತ್ತಿರಲಿಲ್ಲ. ಸಿಕ್ಕ ಸಿಕ್ಕಕಡೆ ಅದನ್ನೇ ಕೇಳುತ್ತಿರಲಿಲ್ಲ. ಅದಕ್ಕೂ ಒಂದು ಪದ್ಧತಿ ಇತ್ತು. ಹೌದು. ಈ ತಮ್ಮ ಇಷ್ಟದ ಆಹಾರಕ್ಕೆ ಅವರು ಹೋಗುತ್ತಿದ್ದುದು ಒಂದೇ ಹೋಟೆಲಿಗೆ. ಅದು ಬೆಂಗಳೂರು ಮೆಜೆಸ್ಟಿಕ್ ಸಮೀಪ ಇರುವ ನವಯುಗ ಹೋಟೆಲ್.
ಹೌದು. ರಾಜ್ ಎಲ್ಲಾ ವಿಷಯದಲ್ಲೂ ಅತ್ಯಂತ ಶಿಸ್ತು ಪಾಲಿಸಿಕೊಡು ಬಂದಿದ್ದರು. ಅದನ್ನು ಇವರ ಕುರಿತು ಕೇಂದ್ರ ಸರಕಾರ ಸಿದ್ಧಪಡಿಸಿರುವ ಸಾಕ್ಷ್ಯಚಿತ್ರದಲ್ಲೂ ಇದನ್ನು ಕಾಣಬಹುದಾಗಿದೆ. ವ್ಯಾಯಾಮ ಮಾಡಿ ಕಟ್ಟುಮಸ್ತಾಗಿ ಇರಿಸಿಕೊಂಡಿದ್ದ ದೇಹಕ್ಕೆ, ಯಾವ ಆಹಾರ ಬೇಕು ಎನ್ನುವುದನ್ನು ರಾಜ್ ನಿರ್ಧಾರ ಮಾಡುತ್ತಿದ್ದರಂತೆ.
ಸಾಕ್ಷ್ಯಚಿತ್ರದಲ್ಲಿ ಅವರ ಕೊನೆಯ ಪುತ್ರ ಪುನೀತ್ ರಾಜ್ ಕುಮಾರ್ ಆಡಿದ ಮಾತು ನಿಜಕ್ಕೂ ಮಾರ್ಮಿಕವಾಗಿವೆ. 'ಡಾ. ರಾಜ್ ಯಾವಾಗಲೂ ನೋವಲ್ಲಿ ನಲಿವನ್ನು ಹುಡುಕಿದವರು. ಸದಾ ಹಸನ್ಮುಖಿಯಾಗಿರುತ್ತಿದ್ದ ಇವರು ಎಲ್ಲಿಯೂ ತಮ್ಮ ನೋವನ್ನು ಹೇಳಿಕೊಳ್ಳಲೇ ಇಲ್ಲ. ಒಳಗೊಳಗೇ ಎಲ್ಲವನ್ನೂ ನುಂಗಿಕೊಂಡು ಕಾಲವಾದರು. ಇದರಿಂದ ಅವರ ನಗು ಮಾತ್ರ ನಮಗೂ ಸೇರಿದಂತೆ ಎಲ್ಲರಿಗೂ ಕಾಣಿಸಿತು' ಎಂಬ ಮಾತು ಹೃದಯಸ್ಪರ್ಶಿಯೆನಿಸುತ್ತದೆ.
ಈ ಸಾಕ್ಷ್ಯಚಿತ್ರದಲ್ಲಿ ನಟಿ ಜಯಂತಿ, ಬಾಲಿವುಡ್ಡಿನ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತಿತರರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ರಾಜ್ ಜತೆ ಕಳೆದ ಕೆಲ ಸುಂದರ ಕ್ಷಣವನ್ನು ಬಿಚ್ಚಿಟ್ಟಿದ್ದಾರೆ. ಒಟ್ಟಾರೆ ರಾಜ್ ಕುಮಾರ್ ನಮ್ಮೊಂದಿಗೆ ಇಲ್ಲ. ಆದರೆ ಅವರ ನೆನಪು ಮಾತ್ರ ಅಮರ, ಅವರ ಸಾಧನೆಗಳೂ ಕೂಡಾ. ರಾಜ್‌ಗೆ ಮತ್ತೊಮ್ಮೆ ದೊಡ್ಡ ಸಲಾಮ್.