ಪ್ರೇಮಿಸಂನ ಯಶಸ್ಸಿನ ಬಗ್ಗೆ ಖುಷಿಯಲ್ಲಿರುವ ನಮ್ಮ ಅಮೂಲ್ಯ ಇದೀಗ ಮತ್ತೊಂದು ಚಿತ್ರಕ್ಕೆ ಸಜ್ಜಾಗುತ್ತಿದ್ದಾಳೆ. ತನ್ನ ಖಾಸಾ ಏಕೈಕ ಅಣ್ಣ ದೀಪಕ್ ಅವರ ಚಿತ್ರವೊಂದರಲ್ಲಿ ನಟಿಸಲಿದ್ದಾರಂತೆ. ದೀಪಕ್‌ಗೂ ಇದು ಚೊಚ್ಚಲ ಚಿತ್ರವಾಗಿದ್ದು, ಈಗಾಗಲೇ ಸದ್ದಿಲ್ಲದೆ ಚಿತ್ರದ ಚಿತ್ರಕಥೆ ಮಾಡಿ ಮುಗಿಸಿದ್ದಾರಂತೆ. ಎಲ್ಲವೂ ಅಂದುಕೊಂಡಂತೆಯೇ ಆದರೆ ಈ ಜೂನ್‌ಗೆ ಅಣ್ಣನ ಚಿತ್ರದಲ್ಲಿ ತಂಗಿ ಅಮೂಲ್ಯಳ ಈ ಹೆಸರಿಡದ ಚಿತ್ರ ಸೆಟ್ಟೇರಬಹುದು.
ಅಮೂಲ್ಯರ ಅಣ್ಣ ದೀಪಕ್ ಈ ಹಿಂದೆಯೇ ಪ್ರಶಾಂತ್ ನಿರ್ದೇಶನದ ಸಾಕಷ್ಟು ಮೆಚ್ಚುಗೆ ಗಳಿಸಿದ್ದ ಲವ್ ಗುರು ಚಿತ್ರಕ್ಕೆ ಪ್ರಶಾಂತ್ ಜೊತೆ ಸೇರಿಸಿ ಚಿತ್ರಕಥೆ ರಚಿಸಿದ್ದರು. ಹಾಗಾಗಿ ಸಿನಿಮಾರಂಗದ ಗುರುತು ಪರಿಚಯವೇ ಇಲ್ಲದಾತನಲ್ಲ ಈ ದೀಪಕ್. ಸಿನಿಮಾ ಎಡಿಟಿಂಗ್, ಗ್ಯಾಫಿಕ್ಸ್ ಹೀಗೆ ಸಿನಿಮಾದ ತಾಂತ್ರಿಕ ರಂಗದಲ್ಲೂ ಪಳಗಿರುವ ದೀಪಕ್ ತನ್ನದೇ ಸಂಸ್ಥೆಯನ್ನೂ ಹೊಂದಿದ್ದಾರೆ.
ಪ್ರಾಂಶುಪಾಲರಿಂದ ಬುದ್ಧಿವಾದ: ಸದ್ಯಕ್ಕೆ ಈಗಷ್ಟೇ ಅಮೂಲ್ಯ ಪ್ರಥಮ ಪಿಯುಸಿಯನ್ನು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮುಗಿಸಿದ್ದಾರೆ. ಕಾಮರ್ಸ್ ಆರಿಸಿರುವ ಅಮೂಲ್ಯಗೆ ಮುಂದಿನ ವರ್ಷ ತನ್ನ ಶೈಕ್ಷಣಿಕ ಜೀವನದ ಮಹತ್ವದ ಘಟ್ಟ ಎಂಬ ಅರಿವಿದೆ. ಮೊದಲ ಪಿಯುಸಿಯಲ್ಲಿ ತರಗತಿಗೆ ಪ್ರೇಮಿಸಂ, ನಾನು ನನ್ನ ಕನಸು ಚಿತ್ರದ ಸೂಟಿಂಗಿಗಾಗಿ ಸಾಕಷ್ಟು ಚಕ್ಕರ್ ಹೊಡೆದಿರುವ ಅಮೂಲ್ಯಗೆ ಪ್ರಾಂಶುಪಾಲರು ಈಗಲೇ ವಾರ್ನಿಂಗ್ ನೀಡಿದ್ದಾರೆ. ಮುಂದಿನ ವರ್ಷ ಸೆಕೆಂಡ್ ಪಿಯುಸಿ. ಈ ವರ್ಷದ ಹಾಗಲ್ಲಮ್ಮ. ಸ್ವಲ್ಪ ಗಮನವಿಟ್ಟು ಓದು. ತರಗತಿಗೆ ಗೈರು ಹಾಜರಾದರೆ ಕಷ್ಟ. ಹೆಚ್ಚು ಗೈರುಹಾಜರಾದರೆ, ಸೆಕೆಂಡ್ ಪಿಯುಸಿ ಎಕ್ಸಾಮ್ ಬರೆಯೋದಕ್ಕೆ ಹಾಲ್ ಟಿಕೆಟ್ ಸಿಗಲ್ಲ. ಈಗಲೇ ಆ ವಿಚಾರವೆಲ್ಲ ಸ್ವಲ್ಪ ತಲೆಯಲ್ಲಿರಲಿ. ಹೆಚ್ಚು ಕ್ಲಾಸಿಗೆ ಬಂಕ್ ಮಾಡ್ಬೇಡ ಎಂದು ಬುದ್ಧಿವಾದ ಹೇಳಿದ್ದಾರಂತೆ.
ಅದಕ್ಕಾಗಿಯೇ ಇರಬೇಕು, ಅಮೂಲ್ಯ ಮುಂದಿನ ವರ್ಷಕ್ಕೆ ಯಾವ ಪ್ರಾಜೆಕ್ಟನ್ನೂ ಸದ್ಯಕ್ಕೆ ಒಪ್ಪಿಕೊಂಡಿಲ್ಲ. ಪ್ರಕಾಶ್ ರೈ ನಿರ್ದೇಶನದ ನಾನು ನನ್ನ ಕನಸು ಚಿತ್ರದ ಚಿತ್ರೀಕರಣ ಮುಗಿದಿದೆ. ಸದ್ಯದಲ್ಲೇ ಈ ಚಿತ್ರ ಬಿಡುಗಡೆ ಕಾಣಲಿದ್ದು, ಆ ಬಗ್ಗೆ ಸಾಕಷ್ಟು ಭರವಸೆಯಿಂದಿದಿದ್ದಾರೆ ಅಮೂಲ್ಯ. ತನ್ನ ಅಣ್ಣನ ಚಿತ್ರ ಬಿಟ್ಟರೆ ಸದ್ಯ್ಕಕೆ ಅಮೂಲ್ಯ ಕೈಯಲ್ಲಿ ಮುಂದಿನ ವರ್ಷ ಯಾವುದೇ ಚಿತ್ರಗಳಿಲ್ಲ. ಅಮೂಲ್ಯ ಮುಂದಿನ ವರ್ಷ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿ ಉತ್ತಮ ಅಂಕ ಪಡೆಯುವಂತಾಗಲಿ ಎಂದು ಹಾರೈಸೋಣ.