ಇಂದು ಕೇವಲ ಹಿರಿತೆರೆ ಮಾತ್ರವಲ್ಲ. ಕಿರುತೆರೆಯಲ್ಲೂ ಕಲಾವಿದರಿಗೆ ಮಿಂಚಲು ಅವಕಾಶ ಇದೆ ಎಂಬುದರ ಅರಿವು ಚಿತ್ರರಂಗದ ನಟರಿಗಾಗಿದೆ. ಅದಕ್ಕಾಗಿಯೇ ಖಾಸಗಿ ಟಿವಿ ವಾಹಿನಿಯತ್ತ ಚಿತ್ರರಂಗದ ದಂಡು ಹರಿದು ಬರುತ್ತಿದೆ. ಸ್ವಯಂವರಕ್ಕೆ ರಕ್ಷಿತಾ ಬಂದರು, ಕಥೆ ಅಲ್ಲ ಜೀವನಕ್ಕೆ ಲಕ್ಷ್ಮಿ ಬಂದು ಹೋದರು, ಬದುಕು ಜಟಕಾ ಬಂಡಿಯಲ್ಲಿ ಮಾಳವಿಕಾರನ್ನು ನೋಡಿದ್ದೇವೆ, ನನ್ನ ಹಾಡು ನನ್ನದುನಲ್ಲಿ ವಿನಯಾ ಪ್ರಸಾದ್ ಕೂಡಾ ಬಂದಿದ್ದಾರೆ. ತಾರಾ ಸಹ ಒಂದು ಕಾರ್ಯಕ್ರಮ ನಡೆಸಿಕೊಡುತ್ತಿದ್ದುದು ಗೊತ್ತು. ಇದೀಗ ಇಂಥವರ ಪಟ್ಟಿಗೆ ನಮ್ಮ ಕಿಚ್ಚ ಸುದೀಪ್ ಕೂಡಾ ಸೇರ್ಪಡೆಯಾಗಿದ್ದಾರೆ. ಹಿರಿತೆರೆಯ ಸಾಕಷ್ಟು ಪ್ರಾಜೆಕ್ಟ್ ಹೊಂದಿದ್ದರೂ, ಸುದೀಪ್ ಕಿರುತೆರೆಗೆ ಬಂದಿದ್ದಾರೆ!
ಕನ್ನಡ ಚಿತ್ರರಂಗದ ಅತ್ಯಂತ ಬ್ಯುಸಿ ನಟ ಎನಿಸಿರುವ ಸುದೀಪ್ ಈಗ ಕನ್ನಡದ ಒಂದು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲು ಅಣಿಯಾಗುತ್ತಿದ್ದಾರೆ. ಕಾರ್ಯಕ್ರಮದ ಹೆಸರು ಕೂಡಾ ಸುದೀಪ್ ಎಂದೇ ಆಗಿದೆ. ಇವರು ಇದರಲ್ಲಿ ಆಪ್ತ ಸಲಹೆಗಾರ, ಆತ್ಮೀಯ ಗೆಳೆಯ, ಮುಖ್ಯ ಅತಿಥಿಯಾಗಿ ವೀಕ್ಷಕರೆದುರು ಬಂದು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇದೊಂದು ವಿಭಿನ್ನ, ವಿಶಿಷ್ಟ ರಿಯಾಲಿಟಿ ಶೋ ಎನಿಸಿಕೊಳ್ಳಲಿದೆ ಎಂಬುದು ಸದ್ಯದ ಸುದ್ದಿ.
ಈ ರಿಯಾಲಿಟಿ ಶೋನಲ್ಲಿ ಹಳ್ಳಿ ಹುಡುಗಿಯರ ಜೀವನ ಹೇಗಿರುತ್ತೆ ಎಂಬುದನ್ನು ಪಟ್ಟಣದ ಹುಡುಗಿಯರಿಗೆ ತೋರಿಸುವ ಯತ್ನ ಮಾಡಲಾಗುತ್ತಿದೆ. ಇದಕ್ಕಾಗಿ 10 ಮಂದಿ ಪಟ್ಟಣದ ಹುಡುಗಿಯರನ್ನು ಆಯ್ಕೆ ಮಾಡಿ ಅವರಿಂದ ಹಳ್ಳಿ ಹುಡುಗಿಯರು ಮಾಡುವ ಕೆಲಸವನ್ನು ಮಾಡಿಸಲಾಗುತ್ತಿದೆ. ಇಲ್ಲಿ ಸುದೀಪ್ ಮಾರ್ಗದರ್ಶಕರಾಗಿದ್ದಾರೆ. ಶಿವಮೊಗ್ಗದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಸದ್ಯವೇ ಖಾಸಗಿ ಟಿವಿ ವಾಹಿನಿಯೊಂದರಲ್ಲಿ ಈ ರಿಯಾಲಿಟಿ ಶೋ ಆರಂಭಗೊಳ್ಳಲಿದೆ.
ಹಳ್ಳಿಯಲ್ಲಿಯೇ ಹುಟ್ಟಿ ಬೆಳೆದ ಸುದೀಪ್ ಈ ಮೂಲಕ ಹಳ್ಳಿ ಋಣ ತೀರಿಸಲು ಮುಂದಾಗಿರುವುದು ನಿಜಕ್ಕೂ ಸ್ಪೆಷಲ್. ಇವರ ಯತ್ನ ಫಲ ಕಾಣಲಿ ಎಂದು ಹಾರೈಸೋಣ.