ರಮ್ಯಾ ಈಗ ಮಥುರಾನಗರಿಯತ್ತ ಮುಖ ಮಾಡಿದ್ದಾರೆ. ರಾಧೆಯ ಪ್ರೇಮಲೋಕದ ಗುಂಗಿನಲ್ಲೀಗ ರಮ್ಯಾ ಕಾಲ ಕಳೆಯುತ್ತಿದ್ದಾರಂತೆ. ಹೌದು. ರಮ್ಯಾ ಹೊಸ ಸಿನಿಮಾವೊಂದಕ್ಕೆ ಅಣಿಯಾಗುತ್ತಿದ್ದಾರೆ. ಚಿತ್ರದ ಹೆಸರು ಮಥುರಾನಗರಿ- ರಾಧೆಯ ಪ್ರೇಮಲೋಕ. ಒಂದು ಪ್ರೀತಿಯ ಕಥೆ ಎಂಬ ಚಿತ್ರ ನಿರ್ದೇಶಿಸಿದ್ದ ರಾಜಶೇಖರ್ ರಾವ್ ಈ ಚಿತ್ರ್ಕಕೆ ಆಕ್ಷನ್ ಕಟ್ ಹೇಳಲು ತಯಾರಾಗಿದ್ದಾರೆ.
ಹಾಂ, ಅಂದಹಾಗೆ ಇಲ್ಲಿ ರಮ್ಯಾ ಎಂಬ ರಾಧೆಗೆ ಕೃಷ್ಣನಾಗಿ ಬರುತ್ತಿರುವುದು ಅದೇ ಅಮೃತಧಾರೆಯಲ್ಲಿ ರಮ್ಯಾರಿಂದ ಹುಡುಗಾ ಹುಡುಗಾ ಓ ನನ್ನ ಮುದ್ದಿನ ಹುಡುಗಾ.. ಎಂದು ಪ್ರೀತಿ ಮಾಡಿಸಿಕೊಂಡಿದ್ದ ಮುದ್ದು ಮುಖದ ಚೆಲುವ ಧ್ಯಾನ್. ಹೌದು. ಅಮೃತಧಾರೆ ಎಂಬ ಹಿಟ್ ಚಿತ್ರದ ಜೋಡಿ ಈಗ ಮತ್ತೆ ಮಥುರಾನಗರಿಯ ಮೂಲಕ ಜೋಡಿಯಾಗಲಿದ್ದಾರೆ.
ರಾಜಶೇಖರ್ ಹೇಳುವಂತೆ, ನನಗೆ ಧ್ಯಾನ್ ಅವರನ್ನು ನನ್ನ ಪ್ರೀತಿಯ ಹುಡುಗ ಚಿತ್ರದಿಂದಲೂ ಪರಿಚಯ. ಆ ಚಿತ್ರಕ್ಕೆ ನಾನು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಹಾಗಾಗಿ ಈ ಚಿತ್ರದ ಪಾತ್ರ ಧ್ಯಾನ್‌ಗೆ ಹೇಳಿ ಮಾಡಿಸಿದಂತಿದೆಯೆಂದು ನಾನು ಧ್ಯಾನ್ ಸಂಪರ್ಕಿಸಿದೆ. ಅವರು ರಮ್ಯಾ ಜೊತೆ ಮತ್ತೆ ನಟಿಸಲು ಅವಕಾಶ ದಕ್ಕಿದ್ದಕ್ಕೆ ಥ್ರಿಲ್ಲಾಗಿ ಹೋದರು ಎಂದು ನಿರ್ದೇಶಕ ರಾಜಶೇಖರ್ ವಿವರಿಸುತ್ತಾರೆ.
IFM
ಚಿತ್ರ ಸಂಪೂರ್ಣವಾಗಿ ನಾಯಕಿ ಪ್ರಧಾನವಾದುದು. ಹಾಗಾಗಿ ಪಾತ್ರಕ್ಕೆ ಖಂಡಿತಾ ರಮ್ಯಾ ಸೂಟ್ ಆಗುತ್ತಾರೆ. ಚಿತ್ರದಲ್ಲಿ ರಮ್ಯಾ ಆಧುನಿಕ ರಾಧೆ. ಅಲ್ಲದೆ ಚಿತ್ರಕ್ಕೆ ಪಕ್ಕಾ ಸಿಟಿಯ ಹುಡುಗನ ಲುಕ್ ಇರುವ ನಟ ಬೇಕಾಗಿತ್ತು. ಹಾಗಾಗಿ ಧ್ಯಾನ್ ನೆನಪಾದರು ಎನ್ನುತ್ತಾರೆ ರಾಜಶೇಖರ್.
ಹಾಗೆ ನೋಡಿದರೆ ಮೊದಲು ರಾಜಶೇಖರ್ ಈ ಪಾತ್ರಕ್ಕೆ ಸಂಪರ್ಕಿಸಿದ್ದು ಮತ್ತೊಬ್ಬ ಸುರಸುಂದರಾಂಗ ನಟ ಚೇತನ್ ಅವರನ್ನು. ಆದರೆ ಚೇತನ್ ಈ ಚಿತ್ರಕ್ಕೆ ನೋ ಹೇಳಿದ ಕಾರಣ ಪಾತ್ರ ಧ್ಯಾನ್ ಕೊರಳಿಗೆ ಬಿತ್ತು. ಈ ಚಿತ್ರ ನಾಯಕಿ ಪ್ರಧಾನವಾದುದರಿಂದ ಹಾಗೂ ನಾಯಕನಿಗೆ ನಟನೆಗೆ ಹೇಳಿಕೊಳ್ಳುವಂಥಾ ಅವಕಾಶ ಇಲ್ಲದಿರುವುದೇ ಚೇತನ್ ಅರು ಈ ಚಿತ್ರವನ್ನು ರಿಜೆಕ್ಟ್ ಮಾಡಲು ಕಾರಣ ಎನ್ನಲಾಗುತ್ತಿದೆ. ಆದರೂ, ರಾಜಶೇಖರ್ ಮಾತ್ರ ಚೇತನ್ ನೋ ಹೇಳಲು ಕಾರಣ ಬಿಚ್ಚಿಡೋದಿಲ್ಲ. ಒಪ್ಪೋದು ಬಿಡೋದು ಅವರವರ ಪರ್ಸನಲ್ ವಿಷಯ. ಅದರ ಬಗ್ಗೆ ನಾನು ಮಾತಾಡಲ್ಲ ಎಂಬ ವಾದ ರಾಜಶೇಖರ್‌ದು.
ಆದರೆ ನಾಯಕಿ ಪ್ರಧಾನವಾದ ಚಿತ್ರ ಎಂಬ ಕಾರಣ್ಕಕೆ ನಾನು ಚಿತ್ರ ರಿಜೆಕ್ಟ್ ಮಾಡಿದ್ದಲ್ಲ ಎಂದು ಚೇತನ್ ಸ್ಪಷ್ಟಪಡಿಸಿದ್ದಾರೆ. ನನಗೆ ಇನ್ನೊಂದು ಚಿತ್ರದ ಜೊತೆಗೆ ಡೇಟ್ಸ್ ಸಮಸ್ಯೆ ಎದುರಾಯ್ತು. ಅದಕ್ಕೆ ನೋ ಹೇಳಿದೆ ಅಷ್ಟೆ. ನಾನು ಅತಿಥಿ ಪಾತ್ರದಲ್ಲೂ ನಟಿಸಿದಾತ. ಹಾಗಾಗಿ ನಾಯಕಿ ಪ್ರಧಾನವಾದರೆ ನನಗೇನು ಅಭ್ಯಂತರವಿಲ್ಲ ಎಂದು ಚೇತನ್ ಹೇಳಿದ್ದಾರೆ.
ಧ್ಯಾನ್ ಮಾತ್ರ ಈ ಚಿತ್ರದ ಕಥೆ ಕೇಳಿ ಥ್ರಿಲ್ಲಾಗಿದ್ದಾರಂತೆ. ನಾನು ಅಮೃತಧಾರೆಯ ನಂತರ ರಮ್ಯಾ ಜೊತೆ ನಟಿಸಲು ಆಸೆಪಟ್ಟರೂ ಅವಕಾಶ ಸಿಕ್ಕಿರಲಿಲ್ಲ. ಇದೀಗ ಅವಕಾಶ ದಕ್ಕಿದೆ. ನನ್ನ ಎಷ್ಟೋ ಮಂದಿ ಅಭಿಮಾನಿಗಳು ನನಗೆ ಈಗಲೂ ರಮ್ಯಾ ಜೊತೆ ನಟಿಸಿ ಎಂದು ಇಮೇಲ್ ಮಾಡುತ್ತಿರುತ್ತಾರೆ. ಚಿತ್ರಕಥೆಯೂ ಚೆನ್ನಾಗಿದೆ ಅಂದ್ಮೇಲೆ ಯಾಕೆ ತಾನೇ ನಾನು ಅವಕಾಶ ಬಿಟ್ಟುಕೊಡಲಿ ಎನ್ನುತ್ತಾರೆ ಧ್ಯಾನ್.
ಅಂದಹಾಗೆ ರಮ್ಯಾ ಹಾಗೂ ಧ್ಯಾನ್ ಇಬ್ಬರೂ ಒಳ್ಳೆ ಫ್ರೆಂಡ್ಸ್ ಕೂಡಾ ಹೌದು. ಈ ಜೋಡಿಯ ಚಿತ್ರ ಮತ್ತೆ ಯಶಸ್ಸು ಕಾಣಲಿ ಎಂದು ಹಾರೈಸೋಣ.