ಹನ್ನೆರಡು ವರ್ಷಗಳ ಸುದೀರ್ಘ ವಿರಾಮದ ನಂತರ ಚಿತ್ರ ನಿರ್ದೇಶನಕ್ಕೆ ಬಂದಿರುವ ಎಂ.ಎಸ್. ಸತ್ಯು ಇದೀಗ ಇಜ್ಜೋಡು ಪ್ರಸವ ವೇದನೆ ಅನುಭವಿಸುತ್ತಿರುವುದು ಗೊತ್ತೇ ಇದೆ. 80ರ ಹರೆಯದ ಈ ನಿರ್ದೇಶಕ ಇನ್ನೊಂದು ಚಿತ್ರ ಮಾಡುವುದು ಯಾವಾಗಲೋ ಅಂದುಕೊಳ್ಳುತ್ತಿರುವ ಅಭಿಮಾನಿಗಳಿಗೆ ಒಂದು ಸಂತಸದ ಸುದ್ದಿಯಿದೆ. ಇಜ್ಜೋಡು ಬಿಡುಗಡೆ ಆಗುತ್ತಿದ್ದಂತೆ ಇನ್ನೊಂದು ಚಿತ್ರ ನಿರ್ದೇಶನ ಕೈಗೆತ್ತಿಕೊಳ್ಳಲು ಸತ್ಯು ನಿರ್ಧರಿಸಿದ್ದಾರೆ.
ಇದಂತೂ ನಿಜಕ್ಕೂ ಕಲಾತ್ಮಕ ಚಿತ್ರ ವೀಕ್ಷಕರಿಗೆ ನವರಾತ್ರಿ ಹಬ್ಬದ ನಂತರ ತಕ್ಷಣ ಬರುವ ದೀಪಾವಳಿ ಹಬ್ಬದೂಟದಂತೆ ಸತ್ಯು ಚಿತ್ರ ಲಭಿಸಲಿದೆ. ಸದ್ಯ ಇವರ ಬಳಿ ಮೂರು ಚಿತ್ರ ಇದೆಯಂತೆ. ಇದರಲ್ಲಿ ಒಂದು ಸತ್ಯ ಘಟನೆಯಾಗಿದ್ದು, ಹೊಸ ಚಿತ್ರಕ್ಕೆ ಇದು ಪ್ರೇರಣೆಯಂತೆ. ಸಂಗೀತಗಾರನೊಬ್ಬನ ಬದುಕಿನ ನಾನಾ ಮಜಲುಗಳನ್ನು ತೋರಿಸುವ ಯತ್ನ ಈ ಚಿತ್ರದಲ್ಲಿ ಆಗಲಿದೆ ಎಂಬ ಸುಳಿವು ಬಿಟ್ಟುಕೊಟ್ಟರು ಸತ್ಯು.
ಈ ಚಿತ್ರ ನಾಟಕೀಯ ಅಂಶ ಒಳಗೊಂಡ ಟ್ರಾಜಿಕ್ ಕಥೆಯಂತೆ. ಒಟ್ಟಾರೆ ಇದೂ ಸಹ ಸತ್ಯು ಶೈಲಿಯ ಕಥೆ. ಸಾಮಾಜಿಕ ಕಳಕಳಿ, ರಾಜಕೀಯ ಡೊಂಬರಾಟ ಎಲ್ಲವೂ ಮೇಳೈಸಿದ ಈ ಚಿತ್ರ ಜನತೆಗೆ ಇನ್ನೊಂದು ಹಬ್ಬವಾಗಿ ಸಿಗುವಲ್ಲಿ ಸಂಶಯವಿಲ್ಲ. ಇಂಥ ಇಳಿ ವಯಸ್ಸಿನಲ್ಲೂ ಇಂತ ಸಾಹಸಕ್ಕೆ ಇಳಿದಿರುವ ಸತ್ಯು ನಿಜಕ್ಕೂ ಗಟ್ಟಿಗರು ಎನ್ನುತ್ತಿದೆ ಗಾಂಧಿನಗರ.