ಮಠ ಹಾಗೂ ಎದ್ದೇಳು ಮಂಜುನಾಥ ಚಿತ್ರ ನೋಡಿದವರಿಗೆ ನಿರ್ದೇಶಕ ಗುರುಪ್ರಸಾದ್ ಒಬ್ಬ ಉತ್ತಮ, ನಿಷ್ಣಾತ, ಬುದ್ದಿವಂತ ಹಾಗೂ ಯಶಸ್ವಿ ನಿರ್ದೇಶಕ ಎಂದನಿಸುವಲ್ಲಿ ಸಂಶಯವೇ ಮೂಡುವುದಿಲ್ಲ.
ಒಬ್ಬ ಅತ್ಯುತ್ತಮ ನಿರ್ದೇಶಕನಾಗಿ, ಕನ್ನಡಕ್ಕೆ ವಿಭಿನ್ನ ಮಾದರಿಯ ಚಿತ್ರ ನೀಡಿ ಗೆದ್ದಿರುವ ಗುರು ಇವೆರಡೂ ಚಿತ್ರದಲ್ಲಿ ಚಿಕ್ಕ ಪಾತ್ರ ನಿರ್ವಹಿಸಿ ಜನರ ಮನ ಗೆದ್ದಿದ್ದರು. ತಮ್ಮದೇ ನಿರ್ದೇಶನದ ಚಿತ್ರದಲ್ಲಿ ಹಾಗೆ ಬಂದು ಹೀಗೆ ಹೋಗುವುದು ಅನೇಕ ಚಿತ್ರ ನಿರ್ಮಾಪಕರ, ನಿರ್ದೇಶಕರ ಸಂಪ್ರದಾಯ. ಕನ್ನಡದ ಹಲವರು ಈ ಕಾರ್ಯವನ್ನು ತಮ್ಮ ಚಿತ್ರದಲ್ಲಿ ಮಾಡಿ ತೋರಿಸಿದ್ದಾರೆ.
ಆದರೆ ಗುರು ಹಾಗೆ ಮಾಡಿಲ್ಲ. ಬಂದು ಅಭಿನಯಿಸಿದ ಕೆಲವೇ ಡೈಲಾಗ್‌ಗಳಲ್ಲಿ ಜನರನ್ನು ಮೋಡಿ ಮಾಡಿದ್ದರು. ಅವೆಲ್ಲಾ ಈಗ ಇತಿಹಾಸ ಬಿಡಿ. ಆದರೆ ಈ ಗುರುಪ್ರಸಾದ್ ತಮ್ಮ ಚಿತ್ರ ಬಿಟ್ಟು ಬೇರೆಯವರ ಚಿತ್ರದಲ್ಲಿ ಈವರೆಗೆ ಬಣ್ಣ ಹಚ್ಚಿರಲಿಲ್ಲ. ಈಗ ಅದೂ ಸಾದ್ಯವಾಗಿದೆ. ನಿರ್ದೇಶಕ, ನಿರ್ಮಾಪಕ ಕೋರಿಕೆ ಮೇರೆಗೆ ಗುರುಪ್ರಸಾದ್ ಈಗ ಪತ್ರಕರ್ತರಾಗಿ ಶಿವಣ್ಣನ ಎದುರು ನಿಲ್ಲಲಿದ್ದಾರೆ. ಮೈಲಾರಿ ಚಿತ್ರದಲ್ಲಿ ಗುರುಪ್ರಸಾದ್ ಪತ್ರಕರ್ತನ ಪಾತ್ರ ನಿಭಾಯಿಸಲಿದ್ದಾರೆ.
ಶಿವರಾಜ್ ಕುಮಾರ್ ಅಭಿನಯದ 99ನೇ ಚಿತ್ರ ಮೈಲಾರಿಯಲ್ಲಿ ಪತ್ರಕರ್ತನ ಪಾತ್ರವೊಂದಕ್ಕೆ ಹೊಂದುವ ಸೂಕ್ತ ವ್ಯಕ್ತಿಗಾಗಿ ಹುಡುಕಾಟ ನಡೆಯುತ್ತಿತ್ತು. ಪತ್ರಕರ್ತರ ಮುಖಲಕ್ಷಣ ಹೊಂದಿರುವ ಗುರುಪ್ರಸಾದ್ ಅವರು ಈ ಪಾತ್ರಕ್ಕೆ ಸೂಕ್ತ ಎಂದು ನಿರ್ದೇಶಕರಿಗೆ ಹೊಳೆಯಲು ತುಂಬ ದಿನ ಬೇಕಾಗಿರಲಿಲ್ಲ. ಹಾಗಾಗಿ ಗುರು ಅವರನ್ನು ಒತ್ತಾಯಿಸಿ ಪಾತ್ರ ನೀಡಲಾಗಿದೆ.
ಅಂದಹಾಗೆ, ಗುರುಪ್ರಸಾದ್ ನಿರ್ದೇಶನದ ಮುಂದಿನ ಚಿತ್ರ ಡೈರೆಕ್ಟರ್ ಸ್ಪೆಷಲ್ ತಯಾರಿಯೂ ಸಾಗಿದೆ. ಬಹುಮುಖ ಪ್ರತಿಭೆ ಗುರುವಿಗೆ ಶುಭವಾಗಲಿ ಎನ್ನೋಣ.