ಹಿರಿಯ ನಟ ದಿವಂಗತ ಡಾ.ವಿಷ್ಣುವರ್ಧನ್ ಮೇಲೆ ಅಪಾರ ಅಭಿಮಾನವಿರುವ ಮಂದಿಗೆ ಇಲ್ಲೊಂದು ಅದ್ಭುತ ಅವಕಾಶವಿದೆ. ವಿಷ್ಣು ಹಾಡಿದ ಹಾಡುಗಳನ್ನು ತಾವೂ ಹಾಡುವ ಮೂಲಕ ತಮ್ಮ ಅಭಿಮಾನವನ್ನು ತೋರ್ಪಡಿಸುವ ಕಾಲ ಬಂದಿದೆ. ಈ ಸೌಭಾಗ್ಯ ಏ.30ರಂದು ಕೂಡಿ ಬಂದಿದೆ.
ಮಂಡ್ಯದ ಕೆ.ಆರ್. ಪೇಟೆ ತಾಲೂಕಿನ ನ್ಯೂ ಕ್ರೇಝಿ ಬಾಯ್ಸ್ ಮೆಲೊಡೀಸ್ ಸಂಸ್ಥೆ ಈ ಒಂದು ಅವಕಾಶವನ್ನು ಜನರಿಗೆ ಕಲ್ಪಿಸಿದೆ. ಇವರ ಹಾಡನ್ನು ಕೇಳ ಬಯಸುವವರು, ಹಾಡಿ ಬಹುಮಾನ ಪಡೆಯಲು ಇಚ್ಛಿಸುವವರು, ಸುಮ್ಮನೇ ವಿಷ್ಣು ನೆನಪು ಮಾಡಿಕೊಳ್ಳಬಯಸುವವರು ಅಂದು ಇಲ್ಲಿಗೆ ಅಗಮಿಸಬಹುದು.
ಇದೊಂದು ಸ್ಪರ್ಧೆ ಆಗಿರುವುದರಿಂದ ಹೆಸರು ನೋಂದಣಿ ಅನಿವಾರ್ಯ. ಆಪ್ತರಕ್ಷಕನಾಗಿ ಕೊನೆಯ ಚಿತ್ರ ಪೂರೈಸಿದ ವಿಷ್ಣುವರ್ಧನ್ ಅವರ ನೆನಪಿಗಾಗಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಹಿರಿಯರು ಹಾಗೂ ಕಿರಿಯರ ವಿಭಾಗದಲ್ಲಿ ಹಾಡು ಹಾಡಿಸುವ ಸ್ಪರ್ಧೆ ನಡೆಯಲಿದೆ ಎನ್ನುವುದು ನ್ಯೂ ಕ್ರೇಜಿ ಬಾಯ್ಸ್ ಮೆಲೊಡೀಸ್ ಮಾಲೀಕ ಹಾಗೂ ಗಾಯಕ ಪ್ರಮೋದ್ ಅಭಿಪ್ರಾಯ.
ಈಗಾಗಲೇ ಸಾಕಷ್ಟು ಮಂದಿ ಹೆಸರು ನೋಂದಾಯಿಸಿದ್ದು, ಸಮಾರಂಭದ ಕ್ಷಣಗಣನೆಯಲ್ಲಿ ಇದ್ದಾರೆ. ಒಟ್ಟಾರೆ ಡಾ. ವಿಷ್ಣುವರ್ಧನ್ ನಾನಾ ರೂಪದಲ್ಲಿ ಇಂದಿಗೂ ಜೀವಂತವಾಗಿರುವುದು ಸತ್ಯ. ನಟನೊಬ್ಬನಿಗೆ ಸಾವಿರಬಹುದು, ಆದರೆ ಆತನ ಅಭಿಮಾನಕ್ಕೆ ಖಂಡಿತ ಸಾವಿಲ್ಲ ಎನ್ನುವುದು ಇದರಿಂದ ನಿಚ್ಚಳವಾಗುತ್ತದೆ. ನಾನಾ ಸಂಘ ಸಂಸ್ಥೆಗಳು ಇಂದು ಇವರ ಹೆಸರಿನ ಪ್ರಶಸ್ತಿ ನೀಡುತ್ತಿವೆ, ಸಮಾರಂಭ ಆಯೋಜಿಸುತ್ತಿವೆ, ಅವಕಾಶ ಸಿಕ್ಕಲ್ಲಿ ಇವರ ಅಭಿಮಾನಿಗಳು ಕಾರ್ಯಕ್ರಮ ನಡೆಸುತ್ತಿದ್ದಾರೆ, ವೇದಿಕೆ ಸಿಕ್ಕಲ್ಲಿ ವಿಷ್ಣು ಅವರನ್ನು ನೆನೆಯುತ್ತಿದ್ದಾರೆ. ಒಬ್ಬ ಶ್ರೇಷ್ಠ ನಟನಿಗೆ ಇನ್ನೇನು ಬೇಕು?