ಹಿಂದಿಯ ಜನಪ್ರಿಯ ನಟ ನಾನಾ ಪಾಟೇಕರ್ ಯಾರಿಗೆ ಗೊತ್ತಿಲ್ಲ. ತಮ್ಮ ಅದ್ಬುತ ಧ್ವನಿ ಹಾಗೂ ಸಮಯೋಚಿತ ಡೈಲಾಗನಿಂದಾಗಿ ಅತ್ಯಂತ ಜನಪ್ರಿಯರಾಗಿರುವ ಇವರು ಕನ್ನಡ ಚಿತ್ರವೊಂದರಲ್ಲಿ ನಟಿಸುತ್ತಿರುವ ವಿಚಾರ ಹೊಸತೇನಲ್ಲ. ಆದರೆ ಅದಕ್ಕಿಂತಲೂ ಇಂಟರೆಸ್ಟಿಂಗ್ ವಿಚಾರ ಎಂದರೆ ಅವರೀಗ ಡಬ್ಬಿಂಗ್ ಕೂಡಾ ಮಾಡುತ್ತಿದ್ದಾರೆ. ಅರ್ಥಾತ್ ತಮ್ಮ ಪಾತ್ರಕ್ಕೆ ತಾವೇ ಕನ್ನಡದಲ್ಲಿ ಕಂಠದಾನ ಮಾಡುತ್ತಿದ್ದಾರೆ.
ತಮ್ಮ ಅಸಲಿ ಖಡಕ್ ದನಿಯನ್ನು ಕನ್ನಡಕ್ಕೆ ಟ್ಯೂನ್ ಮಾಡಿಕೊಂಡು ತಮ್ಮ ಪಾತ್ರಕ್ಕೆ ತಾವೇ ಕಂಠದಾನ ಮಾಡುತ್ತಿದ್ದಾರೆ. ಇದಪ್ಪಾ ವಿಷಯ ಅಂದರೆ, ನಾನಾ ಕನ್ನಡದಲ್ಲಿ ಡೈಲಾಗ್ ಹೊಡಿತಾರೆ, ಅದೂ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಂದರೆ ಅದನ್ನು ನೋಡದೇ ಇರಲು ಸಾಧ್ಯವೇ? ಎಂಬುದೀಗ ನಾನಾ ಅಭಿಮಾನಿಗಳ ವರಸೆ.
ರಮೇಶ್ ಭಾಗವತರ್ ನಿರ್ದೇಶನದ 'ಯಕ್ಷ' ಎಂಬ ಕನ್ನಡ ಚಿತ್ರದಲ್ಲಿ ನಾನಾ ಅಭಿನಯಿಸುತ್ತಿದ್ದಾರೆ. ಚಿತ್ರದ ನಾಯಕ ಲೂಸ್ ಮಾದ ಖ್ಯಾತಿಯ ಯೋಗೀಶ್. ಯೋಗೀಶ್ ಅಪ್ಪನ ಪಾತ್ರದಲ್ಲಿ ನಾನಾ ಪಾಟೇಕರ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸುತ್ತಿದ್ದಾರೆ ನಾನಾ. ಮತ್ತೊಂದು ರಫ್ ಅಂಡ್ ಟಫ್ ಅಭಿನಯದ ಮೂಲಕ ಕನ್ನಡದ ಅಭಿಮಾನಿಗಳನ್ನು ರಂಜಿಸಲು ಬಂದಿರುವ ನಾನಾ, ಕನ್ನಡ ಶಬ್ಧಗಳ ಉಚ್ಚಾರ ಬಹಳ ಕಷ್ಟ ಅನ್ನುತ್ತಾರೆ. ಆದರೆ ಪ್ರಯತ್ನಿಸಿದರೆ ಯಾವ ಭಾಷೆಯೂ ಕಷ್ಟವಲ್ಲ. ಎಲ್ಲಾ ಭಾಷೆಯನ್ನೂ ಸುಲಭವಾಗಿ ಆಗದಿದ್ದರೂ, ಕೊಂಚ ತರಬೇತಿ ಪಡೆದರೆ ಕಲಿತು ಆಡಬಹುದು ಎನ್ನುತ್ತಾರೆ.
ಬೆಂಗಳೂರು ನಗರ ಹಾಗೂ ರಾಜ್ಯದ ನಾನಾ ಭಾಗದಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಹಾಡುಗಳು ಸಿದ್ಧವಾಗಿದ್ದು, ಡೈಲಾಗ್ ಡಬ್ಬಿಂಗ್ ಕಾರ್ಯ ಜಾರಿಯಲ್ಲಿದೆ. ಅತಿ ಶೀಘ್ರವೇ ಚಿತ್ರ ವೀಕ್ಷಕರಿಗೆ ಲಭಿಸಲಿದೆ.