ನನ್ನ ಜೀವನದಲ್ಲಿ ಹೇಳಲೇ ಬೇಕು ಅಂದುಕೊಂಡ ಕಥೆ 'ನಾನು ಮತ್ತು ನನ್ನ ಕನಸು'. ಇದು ಕನ್ನಡಕ್ಕೆ ಹೊಸ ಚಿತ್ರವೊಂದನ್ನು ಕೊಡಲು ಹೊರಟಿರುವ ಪ್ರಕಾಶ್ ರೈ ಅವರ ಬಿಚ್ಚುನುಡಿ. ಚಿತ್ರದಲ್ಲಿ ನನ್ನ ಮಗಳು ಕನಸು. ಮಗಳು ಕನಸು ಹಾಗೂ ನನ್ನ ಬದುಕಿನ ಚಿತ್ರಣವೇ ಈ ಚಿತ್ರ ನಾನು ನನ್ನ ಕನಸು ಎನ್ನುತ್ತಾರೆ ಅವರು.
ತೆಲುಗು ಹಾಗೂ ತಮಿಳು ಭಾಷೆಯ ಚಿತ್ರಗಳಲ್ಲಿ ಅತ್ಯಂತ ಬೇಡಿಕೆ ನಟರಾಗಿರುವ ಪ್ರಕಾಶ್ ಈಗ ಹಿಂದಿಯಲ್ಲೂ ಸಾಕಷ್ಟು ಬೇಡಿಕೆ ಉಳ್ಳ ನಟರಾಗಿದ್ದಾರೆ. ಆದರೆ ತಾಯಿ ನೆಲದಲ್ಲಿ ತಮ್ಮ ಚಿತ್ರ ಬರಲಿ ಎಂಬ ಉತ್ಕಟ ಬಯಕೆಯಿಂದ ಈ ಚಿತ್ರವನ್ನು ಕನ್ನಡದಲ್ಲಿ ಮಾಡುತ್ತಿದ್ದಾರೆ ಪ್ರಕಾಶ್ ರೈ.
'ಒಂದು ಮಗು ಹುಟ್ಟಿದಾಗ ಅಪ್ಪನೂ ಹುಟ್ಟುತ್ತಾನೆ' ಎಂಬ ನಂಬಿಕೆ ನನ್ನದು. ಅದನ್ನು ವಿವರವಾಗಿ ತಿಳಿಯಬೇಕಾದರೆ ನನ್ನ ಈ ಚಿತ್ರ ನೋಡಬೇಕು ಎನ್ನುತ್ತಾರೆ. ಈ ಚಿತ್ರಕ್ಕೆ ಪ್ರೇರಣೆ ಮಗಳದ್ದಾದರೆ, ಕಾರ್ಯಾಚರಣೆ ಅಪ್ಪನದ್ದಾಗಿದೆ ಎಂದು ನಗುತ್ತಾ ಹೇಳುತ್ತಾರೆ.
ಜೀವನದಲ್ಲಿ ನಟ, ನಿರ್ಮಾಪಕ ಹಾಗೂ ನಿರ್ದೇಶಕನಾಗಬೇಕೆಂಬ ಕನಸು ಇತ್ತು. ಅದೀಗ ನನಸಾಗಿದೆ. ಈ ಬಗ್ಗೆ ಸಂತಸವಿದೆ. ಸದ್ಯ ಕನ್ನಡದಲ್ಲಿದ್ದೀನಿ. ದಿನಕ್ಕೊಂದು ನಡೆ ಚಿತ್ರರಂಗದಲ್ಲಿ, ನಾಳೆ ಎಲ್ಲಿರುತ್ತೇನೋ ಗೊತ್ತಿಲ್ಲ. ಇದ್ದಷ್ಟು ಕಾಲ ಇರುವ ಸ್ಥಳಕ್ಕೆ ನ್ಯಾಯ ಒದಗಿಸುತ್ತೇನೆ ಎನ್ನುತ್ತಾರೆ ಪ್ರಕಾಶ್ ರೈ.
ಒಟ್ಟಾರೆ ಉತ್ತಮ ಕನಸು ಹೊತ್ತು ಚಿತ್ರರಂಗದಲ್ಲಿ ನಿರ್ದೇಶಕರಾಗಲು ಹೊರಟಿದ್ದಾರೆ. ಅವರಿಗೆ ಮೊದಲ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಆಶಿಸೋಣ.