ಸಮಾಜದಲ್ಲಿ ಜನರನ್ನು ಆತಂಕಕ್ಕೆ ಈಡು ಮಾಡಿರುವ ಇನ್ನೊಂದು ಶಬ್ಧ 'ಸುಸೈಡ್' ಅರ್ಥಾತ್ ಆತ್ಮಹತ್ಯೆ. ಹೌದು. ಕಾಲೇಜು ವಿದ್ಯಾರ್ಥಿ, ಉದ್ಯೋಗಿ ಯುವತಿ, ಕಾರ್ ಚಾಲಕ, ಬಸ್ ಕಂಡಕ್ಟರ್, ನಿವೃತ್ತ ಉದ್ಯೋಗಿ, ಬೇಸತ್ತ ಕುಡುಕನ ಪತ್ನಿ, ಶ್ರೀಮಂತ ಅಧಿಕಾರಿ ಈ ರೀತಿ ಎಲ್ಲಾ ವಯೋಮಾನದ ಶ್ರೀಮಂತ ಬಡವರೆನ್ನದ ಭೇದ ಈ ಆತ್ಮಹತ್ಯೆಗಿಲ್ಲ.
ಇಂಥ ಆತ್ಮಹತ್ಯೆಯನ್ನು ಕೊಂಚ ನಿಗ್ರಹಿಸಬಹುದು ಎಂದು ಹಲವು ಯತ್ಮಗಳು ನಡೆಯುತ್ತಿದೆ. ಹೌದು. ಜನ ಆತ್ಮಹತ್ಯೆಗೆ ಶರಣಾದರೆ ಸಮಸ್ಯೆ ಪರಿಹಾರವಾಗುವುದಿಲ್ಲ. ಬದಲಾಗಿ ಕುಟುಂಬ ಸದಸ್ಯರಿಗೆ ಸಮಸ್ಯೆ ಶುರುವಾಗುತ್ತದೆ ಎಂಬ ಅರಿವು ಅನೇಕರಿಗೆ ಇರುವುದಿಲ್ಲ. ಆದ್ದರಿಂದ ಆತ್ಮಹತ್ಯೆ ನಿಯಂತ್ರಣಕ್ಕೆ ನಾನಾ ಮಾಧ್ಯಮದ ಮೂಲಕ ಶ್ರಮಿಸಲಾಗುತ್ತಿದೆ.
ಜನರನ್ನು ಕನ್ವಿನ್ಸ್ ಮಾಡುವ ಪ್ರಬಲ ಮಾಧ್ಯಮ ಚಿತ್ರರಂಗ. ಒಂದು ವಿಷಯದ ಮೇಲೆ ಸಿನಿಮಾ ಮಾಡಿದರೆ ಅದನ್ನು ನೋಡಿದ ಜನ ಇಲ್ಲಿ ನೀಡುವ ಮಾರ್ಗದರ್ಶನ ಪಾಲಿಸುತ್ತಾರೆ ಎಂಬ ನಂಬಿಕೆ ಹಲವರದ್ದು. ನಾಯಕ ನಟ ನಟಿಯರು, ಅವರ ಅಭಿನಯ, ನಾಯಕಿ, ಅವಳ ಬಳುಕು ನಡಿಗೆ, ಚಿತ್ರಕಥೆ ಎಲ್ಲವನ್ನೂ ಒಪ್ಪಿ ಅದನ್ನು ಅನುಕರಿಸುವ ಜನ ಇರುವಾಗ, ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎನ್ನುವುದನ್ನೂ ಈ ಮೂಲಕವೇ ತಿಳಿಸಿದರೆ ಹೇಗೆ ಎಂಬ ಯೋಚನೆ ಚಿತ್ರರಂಗದಲ್ಲಿ ಈಗಾಗಲೇ ಮೂಡಿದೆ. ಸದ್ದಿಲ್ಲದೇ ಚಿತ್ರವೊಂದು ಸಿದ್ಧವಾಗಿದೆ.
ಹೆಸರು 'ಸುಸೈಡ್'. ಜೀವನದ ಎಂಥದ್ದೇ ಹತಾಶೆಯ ಸಂದರ್ಭ ಎದುರಾದರೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂಬ ಸಂದೇಶವನ್ನು ಈ ಚಿತ್ರ ನೀಡಲಿದೆ. ಇದನ್ನು ಗುರುಪ್ರಸಾದ್ ನಿರ್ಮಿಸಿ ನಿರ್ದೇಶಿಸಿದ್ದಾರೆ. ಋತ್ವಿಕ್ ಹಾಗೂ ಕಲ್ಯಾಣಿ ಚಿತ್ರದ ನಾಯಕ ನಾಯಕಿಯರು. ಮೈಸೂರು ಮಡಿಕೇರಿ ಸೇರಿದಂತೆ ಹಲವೆಡೆ ಚಿತ್ರೀಕರಣವೂ ಮುಗಿದಿದೆ. ಎಲ್ಲಾ ವ್ಯವಸ್ಥಿತವಾಗಿ ಪೂರ್ಣಗೊಂಡಿದ್ದು, ಮುಂದಿನ ತಿಂಗಳು ಚಿತ್ರ ತೆರೆ ಕಾಣುವ ಸಾಧ್ಯತೆ ಇದೆ.