ಬಾಂಬ್ ಸ್ಪೋಟ ಇಂದು ಎಲ್ಲೆಡೆ ಸಾಮಾನ್ಯ ಅನ್ನುವಂತಾಗಿದೆ. ಇಂಥ ಗಂಭೀರ ವಿಷಯವನ್ನು ಇರಿಸಿಕೊಂಡು ಚಿತ್ರ ಮಾಡಲು ಮುಂದಾಗಿದ್ದಾರೆ.
ಮೂರು ಗುಟ್ಟು ಒಂದು ಸುಳ್ಳು ಒಂದು ನಿಜ ಚಿತ್ರದ ಮೂಲಕ ನಗೆಯ ಬಾಂಬ್ ಸಿಡಿಸಿದ್ದ ನಿರ್ಮಾಪಕ ರಾಜೀವ್ ಹೊಸದೊಂದು ಚಿತ್ರದ ಮೂಲಕ ನಿರ್ದೇಶಕರಾಗಿ ಪ್ರಮೋಶನ್ ಪಡೆಯಲು ನಿರ್ಧರಿಸಿದ್ದಾರೆ. ನಿರ್ದೇಶನಕ್ಕೆ ಇವರು ಆಯ್ಕೆ ಮಾಡಿಕೊಂಡದ್ದು, ಗಂಭೀರ ಸಂಗತಿಯಾಗಿರುವ 'ಬಾಂಬ್'ನ್ನು.
ಹೌದು, ಬಾಂಬ್ ಹಿಡಿದು ಜನರ ಮುಂದೆ ಬರಲು ರಾಜೀವ್ ಸಿದ್ಧತೆ ನಡೆಸಿದ್ದಾರೆ. ಒಂದು ಹಾಸ್ಯ ಚಿತ್ರ ನೀಡಿ ಜನರನ್ನು ಅಪಾರವಾಗಿ ನಗಿಸಿದ್ದ ಇವರೀಗ, ಬಾಂಬ್ ಹಿಡಿದಿರುವುದು ಅನೇಕ ರೀತಿಯ ಚರ್ಚೆಗೂ ಗ್ರಾಸವಾಗುತ್ತಿದೆ. ಇವರ ನಿರ್ಮಾಣದ ಮೊದಲ ಚಿತ್ರ ಮೂರು ಗುಟ್ಟು ಒಂದು ಸುಳ್ಳು ಒಂದು ನಿಜ. ಎರಡನೇಯದು 'ಎರಡನೇ ಮದುವೆ'. ಇದರ ಚಿತ್ರೀಕರಣವೂ ಭರದಿಂದ ಸಾಗಿದ್ದು, ಈ ನಡುವೆ ಬಾಂಬ್ ಅರ್ಥಾತ್ ಭಯೋತ್ಪಾದನೆ ಕುರಿತ ಗಂಭೀರ ಚಿತ್ರವೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ.
ದೇಶದ ಯುವಜನತೆ ಈ ಭಯೋತ್ಪಾದನೆ ಹಾಗೂ ನಕ್ಸಲ್‌ನಂತಹ ಎರಡು 'ಇಸಂ'ಗಳತ್ತ ಹೇಗೆ ವಾಲುತ್ತಿದೆ ಎಂಬುದನ್ನು ಚಿತ್ರದ ರೂಪದಲ್ಲಿ ತೋರಿಸಲು ಇವರು ನಿರ್ಧರಿಸಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಎಲ್ಲಾ ಸರಿಯಾಗಿ ಅದಲ್ಲಿ ಜೂನ್ ವೇಳೆಗೆ ಚಿತ್ರ ಸೆಟ್ಟೇರಲಿದೆ. ಉಳಿದೆಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ರಾಜೀವ್.