ಎಲ್ಲರನ್ನೂ ನಕ್ಕು ನಗಿಸಿದ್ದ ಚಿತ್ರ ಡಕೋಟಾ ಎಕ್ಸ್‌ಪ್ರೆಸ್ ನಿಮಗೆ ನೆನಪಿರಬಹುದು. ಇದರಲ್ಲಿ ಓಂಪ್ರಕಾಶ್ ರಾವ್ ಹಾಗೂ ರಾಕ್‌ಲೈನ್ ವೆಂಕಟೇಶ್ ಅವರ ಸಹಜ ಅಭಿನಯಕ್ಕೆ ಮಾರು ಹೋಗದವರಿಲ್ಲ. ನಕ್ಕು ಹೊಟ್ಟೆ ಹುಣ್ಣಾಗಿಸಿಕೊಂಡವರು ಹಲವರು. ಇದೀಗ ಮತ್ತೊಮ್ಮೆ ಜನರನ್ನು ನಗಿಸಲು ಓಂಪ್ರಕಾಶ್ ರಾವ್ ಎಕ್ಸ್‌ಪ್ರೆಸ್ ವೇಗದಲ್ಲಿ ಬರುತ್ತಿದ್ದಾರೆ. ಇವರ ಹೊಸ ಚಿತ್ರ 'ಜೇಮ್ಸ್ ಪಾಂಡು ಕಾಮಿಡಿ ಎಕ್ಸ್‌ಪ್ರೆಸ್'. ನಗೆಯ ಕಣಜವೇ ಆಗಿರುವ ಈ ಚಿತ್ರ ಕನ್ನಡದಲ್ಲಿ ಅದೆಷ್ಟು ಹಾಸ್ಯಪ್ರೇಮಿಗಳನ್ನು ರಂಜಿಸುವುದೋ ಬಿಡುಗಡೆ ಆದ ನಂತರವೇ ನೋಡಬೇಕು.
ಅಂದಹಾಗೆ, ಈ ಚಿತ್ರಕ್ಕೆ ಖುದ್ದು ಓಂಪ್ರಕಾಶ್ ರಾವ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿ ನಿರ್ದೇಶನದ ಹೊಣೆಯನ್ನೂ ವಹಿಸಿಕೊಂಡಿದ್ದಾರೆ. ಒಂದು ಅದ್ಬುತ ಹಾಸ್ಯ ಚಿತ್ರವನ್ನು ಜನರಿಗೆ ನೀಡುವ ಹಂಬಲ ಈ ರೀತಿ ಈಡೇರಿಸಿಕೊಳ್ಳುತ್ತಿರುವ ರಾವ್ ಅವರಿಗೆ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆಯಂತೆ. ಸ್ವತಃ ರಾವ್ ಅವರೇ ಹೇಳುವಂತೆ, ಈ ಚಿತ್ರ ಯಶಸ್ಸು ಕಾಣುವಲ್ಲಿ ಸಂಶಯವಿಲ್ಲ. ಏಕೆಂದರೆ ಹಾಸ್ಯ ಚಿತ್ರವನ್ನು ಜನ ಇದುವರೆಗೂ ತಿರಸ್ಕರಿಸಿಲ್ಲ. ಕನ್ನಡ ಹೃದಯಕ್ಕೆ ಹಾಸ್ಯದ ಹಸಿವು ಇಂದಿಗೂ ಸಾಕಷ್ಟಿದೆ. ಅದನ್ನು ನೀಗಿಸುವ ಸಣ್ಣ ಪ್ರಯತ್ನವನ್ನು ಮಾಡಿದ್ದೇನೆ ಎನ್ನುತ್ತಾರೆ.
ಜನರನ್ನು ವಂಚಿಸಿ ಹಣ ಮಾಡುವುದನ್ನೇ ಕೆಲಸವಾಗಿಸಿಕೊಂಡ ಸ್ನೇಹಿತರಾದ ಜೇಮ್ಸ್ ಹಾಗೂ ಪಾಂಡು ಅವರ ಕಥೆ ಇದು. ಇದರಲ್ಲಿ ಜೇಮ್ಸ್ ಆಕಸ್ಮಿಕ ಹಾಗೂ ಅನಿವಾರ್ಯವಾಗಿ ಇಬ್ಬರು ಯುವತಿಯರನ್ನು ಮದುವೆ ಆಗುವ ಪರಿಸ್ಥಿತಿ ಎದುರಾಗುತ್ತದೆ. ಅವನ ಪರದಾಟವೇ ಚಿತ್ರದ ವಿಷಯ ವಸ್ತು. ಇದನ್ನು ಉತ್ತಮವಾಗಿ ನಿರೂಪಿಸಲಾಗಿದ್ದು, ಎಲ್ಲಾ ಸರಿಯಾಗಿ ನಡೆದರೆ ಇನ್ನೊಂದು ತಿಂಗಳಲ್ಲಿ ಚಿತ್ರ ತೆರೆಕಾಣಲಿದೆ.
ಚಿತ್ರದ ನಾಯಕರಾಗಿ ಓಂಪ್ರಕಾಶ್ ರಾವ್ ಅವರೇ ನಟಿಸಲಿದ್ದಾರೆ. ಮಧುರ ಅವರ ಸಂಗೀತ, ಮಹದೇವ್ ಹಾಗೂ ವಿಶ್ವನಾಥ್ ಚೌಧರಿ ಛಾಯಾಗ್ರಹಣ, ರಾಜಶೇಖರ ರೆಡ್ಡಿ ಸಂಕಲನ, ಅನು, ಉಷಾ ರಮೇಶ್, ಬಾಲಸುಬ್ರಹ್ಮಣ್ಯಂ, ಅವಿನಾಶ್ ಭಾರದ್ವಾಜ್, ವಿಶಾಲ್ ಸೇರಿದಂತೆ ಫಿಲಂ ಇನ್ಸ್ಟಿಟ್ಯೂಟಿನ ಕೆಲ ವಿದ್ಯಾರ್ಥಿಗಳು ಇದರಲ್ಲಿ ಅಭಿನಯಿಸುತ್ತಿದ್ದಾರೆ. ಎಲ್ಲರಿಗೂ ಆಲ್ ದಿ ಬೆಸ್ಟ್.