ಗುಲಾಮ, ಯೋಗಿ ಹಾಗೂ ಸಂಚಾರಿ ಚಿತ್ರಗಳನ್ನು ನೋಡಿದ್ದರೆ ಈ ಹಾಲುಗಲ್ಲದ ಸುಂದರಿ ಬಿಯಾಂಕಾ ದೇಸಾಯಿ ಗಮನ ಸೆಳೆದಿರುತ್ತಾಳೆ. ನೋಡಿಲ್ಲದಿದ್ದರೂ ಪರವಾಗಿಲ್ಲ ಬಿಡಿ, ಈಗ ಕೇಳಿ ಅವಳ ಸೌಂದರ್ಯದ ರಹಸ್ಯವನ್ನು!
ನೀವು ಇಷ್ಟೊಂದು ಸುಂದರವಾಗಿದ್ದೀರಲ್ಲಾ? ಅದರ ಹಿಂದಿನ ಗುಟ್ಟೇನು? ಅಂದಿದ್ದಕ್ಕೆ ಬಿಯಾಂಕಾ ಕೊಟ್ಟ ವಿವರಣೆ ಇಷ್ಟುದ್ದ ಇತ್ತು. ಹಾಲಿನ ಕೆನೆ ಹಾಗೂ ಅರಿಶಿಣ ಪುಡಿಯನ್ನು ಮಿಶ್ರಮಾಡಿಕೊಂಡು ಮುಖಕ್ಕೆ ಹಚ್ಚುವುದರಿಂದ ಮುಖ ಕಾಂತಿಯುತವಾಗಿ ಕಂಗೊಳಿಸುತ್ತದೆ. ಜತೆಗೆ ಇದು ಮುಖದ ಮೇಲಿನ ಜಿಡ್ಡನ್ನೂ ಕಡಿಮೆ ಮಾಡುತ್ತದೆ. ಇದಲ್ಲದೇ ಹಸಿ ಆಲೂಗಡ್ಡೆಯನ್ನು ನುಣ್ಣಗೆ ರುಬ್ಬಿ ಮುಖಕ್ಕೆ ಬಳಿದುಕೊಳ್ಳುವುದರಿಂದ ಬಹುಜನರನ್ನು ಕಾಡುವ ಡಾರ್ಕ್ ಸರ್ಕಲ್, ಬ್ಲ್ಯಾಕ್ ಹೆಡ್, ಮೊಡವೆ ಎಲ್ಲವೂ ದೂರವಾಗುತ್ತದೆ. ಇದೇ ನನ್ನ ಮುಖಾರವಿಂದದ ಸೀಕ್ರೆಟ್ ಎನ್ನುತ್ತಾಳೆ.
ಮೆಂತೆಯನ್ನು ರುಬ್ಬಿ ತಲೆಗೆ ಮೆತ್ತಿಕೊಳ್ಳುವುದರಿಂದ ಕೂದಲು ನುಣುಪಾಗುತ್ತದೆ. ಅಲ್ಲದೇ ಇದಕ್ಕಾಗಿ ಮೊಟ್ಟೆಯ ಹಳದಿ ಭಾಗವನ್ನು ಸಹ ಹಚ್ಚಬಹುದು. ಕೂದಲು ಉದುರುವ ಸಮಸ್ಯೆ ಇದ್ದರೆ ತೆಂಗಿನ ಎಣ್ಣೆ ಹಾಕಿ ಮಸಾಜ್ ಮಾಡಬಹುದು. ಇದರಿಂದ ಪರಿಹಾರ ಸಿಗುತ್ತದೆ ಎಂದು ಲಲನೆಯರಿಗೆ ತನ್ನ ಬ್ಯೂಟಿ ಟಿಪ್ಸ್ ಹೇಳುತ್ತಾರೆ ಬಿಯಾಂಕ.
ಇಷ್ಟಕ್ಕೇ ನಿಲ್ಲುವುದಿಲ್ಲ ಆಕೆಯ ಬ್ಯೂಟಿ ರಹಸ್ಯ. ಎಲ್ಲಕ್ಕಿಂತ ಮುಖ್ಯವಾಗಿ ದೇಹಾರೋಗ್ಯಕ್ಕೆ ವ್ಯಾಯಾಮ, ವಾಯು ವಿಹಾರ ಅತ್ಯಂತ ಮುಖ್ಯ. ದೇಹದಲ್ಲಿ ನೀರಿನ ಅಂಶ ಕಾಪಾಡಿಕೊಳ್ಳುವುದು ಸಹ ಇಂಪಾರ್ಟೆಂಟ್. ಇದಕ್ಕಾಗಿ ಹೆಚ್ಚು ನೀರು ಕುಡಿಯಿರಿ ಅಂತಾರೆ ಈ ಬಿಯಾಂಕಾ. ಇವನ್ನೆಲ್ಲಾ ನೀವು ನಿರಂತರವಾಗಿ ಮಾಡ್ತಿದ್ದೀರಾ ಅಂದರೆ, ಮುಗುಳ್ನಕ್ಕು 'ಹೌದು ಮತ್ತೆ, ಅದ್ಕೇ ಹೀಗಿರೋದು' ಅಂತಾ ಮುಂಗುರುಳು ಸವರಿಕೊಳ್ಳುತ್ತಾ ಹೊರಟೇ ಹೋದರು. ಇಷ್ಟೆ್ಲಲಾ ಮಾಡಲು ಅವರಿಗೆ ಟೈಂ ಎಲ್ಲಿಂದ ಸಿಗುತ್ತೋ ಅಂತ ಲಲನೆಯರು ಕೇಳೋದ್ರೊಳಗೆ ಅವರು ಅಲ್ಲಿಂದ ಮಾಯವಾಗಿದ್ದರಂತೆ.