ನಮ್ಮ ಗಣೇಶನ ಮದುವೆ ಕಾರ್ಯ ಕೆಲದಿನ ಹಿಂದೆ ಮಂಡ್ಯದಲ್ಲಿ ಭರ್ಜರಿ ವೇಗವಾಗಿ ಸಾಗಿತ್ತು. ಇದೀಗ ಮದುವೆ ಅಬ್ಬರ ಕೊಳ್ಳೆಗಾಲದಲ್ಲಿ ನಡೀತಿದೆ. ಸದಾ ಹಸಿರು ತೋರಣ ಹೊದ್ದಂತೆ ಕಂಗೊಳಿಸುವ ಕೊಳ್ಳೆಗಾಲದ ಎಡಕುರಿಯಾ ಹೆಸರಿನ ಹಳ್ಳಿಯಲ್ಲಿ ಈಗ ಮದುವೆಯ ತಯಾರಿ ಜೋರಾಗಿಯೇ ಸಾಗಿದೆ. ಇದೇನು ಇನ್ನೂ ಅರ್ಥ ಆಗಿಲ್ವಾ? ಹಾಗಾದರೆ ಕೇಳಿ, ನಮ್ಮ ಗಣೇಶ್ ಅಭಿನಯದ 'ಮದುವೆ ಮನೆ' ಚಿತ್ರದ ಚಿತ್ರೀಕರಣದ ಸುದ್ದಿ ಇದು.
ನಾಯಕ ನಟ ಗಣೇಶ್ ಸಹ ಶೂಟಿಂಗ್ ಸ್ಥಳದಲ್ಲೇ ಠಿಕಾಣಿ ಹೂಡಿದ್ದು, ಸಾಲು ಸಾಲು ತೋಪು ಚಿತ್ರಗಳಿಂದ ಸೋತಿರುವ ತಮಗೆ ಒಂದಾದರೂ ಉತ್ತಮ ಚಿತ್ರ ಸಿಗಬಹುದಾ ಅಂತ ಹಂಬಲಿಸುತ್ತಿದ್ದಾರೆ. ಗಣೇಶ್ ಜೊತೆಗೆ ಶ್ರದ್ದಾ ಆರ್ಯ, ಸ್ಪೂರ್ತಿ ಮುಂದಾದ ಕಲಾವಿದರು ಚಿತ್ರೀಕರಣದ ಭರಾಟೆಯಲ್ಲಿ ಸಂಪೂರ್ಣ ತೊಡಗಿಕೊಂಡಿದ್ದಾರೆ.
WD
ಯಜಮಾನ ಚಿತ್ರದ ನಿರ್ಮಾಪಕರಾಗಿದ್ದ ರೆಹಮಾನ್ ಅವರ ಪುತ್ರಿ ರುಹೀನಾ ರೆಹಮಾನ್ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸುನೀಲ್ ಕುಮಾರ್ ಸಿಂಗ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಇದುವರೆಗೂ ಕಿರುತೆರೆಯಲ್ಲಿದ್ದ ನಿರ್ದೇಶಕರೊಬ್ಬರಿಗೆ ಇಲ್ಲಿ ನಿರ್ದೇಶನದ ಹೊಣೆ ವಹಿಸಲಾಗಿದೆ. ಗಣೇಶ್ ಹಾಗೂ ಶ್ರದ್ದಾ ಆರ್ಯ ಈ ಚಿತ್ರದ ನಾಯಕ ನಾಯಕಿಯರಾಗಿದ್ದು, ಜುಗಾರಿಯ ಅವಿನಾಶ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಬಲಾ ನಾಣಿ, ಶರಣ್, ಹನುಮಂತೇಗೌಡ, ಕೆ.ವಿ. ನಾಗೇಶ್ ಕುಮಾರ್, ಡಾ. ನಾಗೇಶ್, ಜಾದವ್ ಮೈಸೂರು ಮುಂತಾದವರು ತಾರಾ ಬಳಗದಲ್ಲಿ ಇದ್ದಾರೆ.
ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ಇದೆ. ಶೇಖರ್ ಚಂದ್ರು ಛಾಯಾಗ್ರಹಣ ನೀಡಲಿದ್ದಾರೆ. ಸೌಂದರ್ ರಾಜ್ ಸಂಕಲನ, ರವಿವರ್ಮ ಸಾಹಸ, ಮೋಹನ್ ಬಿ. ಕೆರೆ ಕಲಾ ನಿರ್ದೇಶಕರಾಗಿದ್ದಾರೆ. ಒಟ್ಟಾರೆ ಮದುವೆ ಬೇಗ ಆಗಲಿ, ಜನರನ್ನು ರಂಜಿಸಲಿ, ಗಣೇಶ್‌ಗೆ ಒಂದು ಬ್ರೇಕ್ ನೀಡಲಿ ಅಂತ ಆಶಿಸೋಣ.