ಪತಿ ಮಹೇಂದರ್ ಜೊತೆಗೆ ವಿಚ್ಛೇದನ ಪ್ರಕರಣ, ಮತ್ತೊಬ್ಬ ಗೆಳೆಯನ ಜೊತೆಗೂ ವಿರಸವಾಗಿದೆ ಎನ್ನುವ ಗಾಸಿಪ್, ರಾಜಕೀಯದಲ್ಲೂ ಏರಲಾಗದ ಸಂದಿಗ್ಧತೆ ಇವೆಲ್ಲವುಗಳಿಂದ ಕನ್ನಡ ಚಿತ್ರರಂಗದ ಅಳುಮುಂಜಿ ಪಾತ್ರಧಾರಿ ಎಂದೇ ಖ್ಯಾತನಾಮರಾದ ಶ್ರುತಿ ಎಲ್ಲಿ ಹೋದರು ಎಂಬ ಪ್ರಶ್ನೆ ಹಲವರಿಗೆ ಕಾಡಿದ್ದಿರಬಹುದು. ಹೌದು. ಶ್ರುತಿ ಅಂದಿನಂತೆ ಈಗ ಕಾಣುತ್ತಿಲ್ಲವಲ್ಲ ಎಂದರೆ ನಿಜ ಕೂಡಾ. ಆದರೆ ಅವರು ಅಂದಿನಂತೆಯೇ ಈಗಲೂ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ ಎಂಬುದೂ ಕೂಡಾ ಅಷ್ಟೇ ನಿಜ!
ಚಿತ್ರರಂಗ ಹಾಗೂ ಸಾರ್ವಜನಿಕರಿಂದ ದೂರ ಇದ್ದಾರೆ ಎಂಬ ಸುದ್ದಿ ಇಂದು ಎಲ್ಲೆಡೆ ಕೇಳುತ್ತಿರುವುದು ಸಾಮಾನ್ಯವಾದರೂ, ಆದರೆ ಇನ್ನೊಂದು ಕಡೆ ಅವರು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ ಎನ್ನುವುದಕ್ಕೆ ಈಗ ಎರಡು ಸಾಕ್ಷಿ ಲಭಿಸಿದೆ. 'ಮಾಯದಂಥ ಮಳೆ' ಹೆಸರಿನ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳಲಿರುವ ಸುದ್ದಿ ಹೊರಬಿದ್ದಿದೆ. ಹೊಸ ಹುಡುಗರ ನೇತೃತ್ವದಲ್ಲಿ ಮೂಡಿಬರುತ್ತಿರುವ ಆ ಚಿತ್ರದಲ್ಲಿ ಶ್ರುತಿ ಹೆಜ್ಜೆ ಹಾಕಲಿದ್ದಾರೆ.
ಇನ್ನೊಂದು ಸುದ್ದಿ ಅಂದರೆ ಮಕ್ಕಳ ನಾಟಕ ನಿರ್ದೇಶಕ ಲಕ್ಷ್ಮಣ್ ನಿರ್ದೇಶನದ 'ನನ್ನ ಗೋಪಾಲ' ಚಿತ್ರಕ್ಕೂ ಅವರು ಸಹಿ ಮಾಡಿದ್ದಾರಂತೆ. ಇಲ್ಲಿ ಅವರು ವಿಧವೆಯ ಪಾತ್ರ ಮಾಡುತ್ತಿದ್ದಾರೆ. ಲಕ್ಷ್ಮಣ್ ಅವರ ಕೋರಿಕೆಯನ್ನು ಶ್ರುತಿ ಅವರು ನಿರಾಕರಿಸಲಿಲ್ಲ. ಕೇಳಿದ ಕೂಡಲೇ ಒಪ್ಪಿ, ದೊಡ್ಡತನ ತೋರಿದರು ಎನ್ನುತ್ತಾರೆ ಲಕ್ಷ್ಮಣ್.
ಇರಲಿ ಒಳ್ಳೆಯದಾಗಲಿ. ಈ ಪ್ರಬುದ್ಧ ನಟಿಯ ವೈಯಕ್ತಿಕ ಜೀವನಕ್ಕಾಗಿ ಚಿತ್ರ ಬದುಕು ಬಲಿಯಾಗದಿರಲಿ ಎಂಬುದೊಂದೇ ಎಲ್ಲರ ಹಾರೈಕೆ.