ನಾನು ನನ್ನ ಕನಸು ಚಿತ್ರ ನಿರ್ದೇಶಿಸುತ್ತಿರುವ ಕನ್ನಡಿಗ ಪ್ರಕಾಶ್ ರೈಗೆ ಕ್ರಿಕೆಟ್ ಅಂದರೆ ಪಂಚಪ್ರಾಣವಂತೆ. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಂದರೆ ಮುಗಿದೇ ಹೋಯಿತು. ಮಾಡುವ ಕೆಲಸವನ್ನೂ ಬದಿಗಿಟ್ಟು ಪಂದ್ಯ ವೀಕ್ಷಿಸುತ್ತಾರಂತೆ. ಒಂದೆಡೆ ಐಪಿಎಲ್ ಫೈನಲ್ ಪಂದ್ಯ ವೀಕ್ಷಿಸುತ್ತಿದ್ದ ರೈ, ಪತ್ರಕರ್ತ ಮಿತ್ರರನ್ನು ಸಂತೋಷ ಕೂಟಕ್ಕೆ ಆಹ್ವಾನಿಸಿದ್ದರು. ಆದರೆ ಅಂದೇ ಐಪಿಎಲ್‌ನ ಫೈನಲ್ ಹಣಾಹಣಿ ಇತ್ತು. ಊಟಕ್ಕೆ ಕರೆದ ತಾಣದಲ್ಲೇ ಟಿವಿಯೂ ಇತ್ತು. ಮಾತಿಗಿಂತ ರೈ ಪಂದ್ಯ ವೀಕ್ಷಿಸಿದ್ದೇ ಹೆಚ್ಚು. ತದೇಕ ಚಿತ್ತರಾಗಿ ಅವರು ಟಿವಿ ನೋಡುತ್ತಿದ್ದರೆ, ಉಳಿದವರೂ ಅವರೊಂದಿಗೆ ಚಪ್ಪಾಳೆ ತಟ್ಟುತ್ತಾ ಪಂದ್ಯ ವೀಕ್ಷಿಸಿದರು.
ಅತಿ ಸೂಕ್ಷ್ಮವಾಗಿ ವೀಕ್ಷಿಸುತ್ತಿದ್ದ ಅವರು ಸಂಪೂರ್ಣ ಚೆನ್ನೈ ಪರ ಘೋಷಣೆ ಕೂಗುತ್ತಾ, ಪಂದ್ಯವನ್ನು ಆನಂದಿಸಿದರು. ಚೆನ್ನೈ ಸೂಪರ್ ಕಿಂಗ್ಸ್‌ನ ಒಬ್ಬೊಬ್ಬ ಅಟಗಾರನ ಒಂದೊಂದು ಹೊಡೆತವೂ ರೈ ಕಣ್ಣಲ್ಲಿ ಹೊಳಪು ಮೂಡಿಸುತ್ತಿತ್ತು. ತಮ್ಮ ನಿರೀಕ್ಷೆಗೆ ತಕ್ಕಂತೆ ಉತ್ತಮ ಹೊಡೆತ ಬಿದ್ದಾಗ ಕುಂತಲ್ಲೇ ಕುಣಿಯುತ್ತಿದ್ದರು, ಎದ್ದು ನಿಂತು ಕೇಕೆ ಹಾಕುತ್ತಿದ್ದರು. ಒಟ್ಟಾರೆ ಇವರ ಕ್ರಿಕೆಟ್ ಪ್ರೇಮ ಮೆಚ್ಚಬೇಕು.
ಇವರು ಕೇವಲ ಪಂದ್ಯ ಮಾತ್ರ ವೀಕ್ಷಿಸಲಿಲ್ಲ. ನಡು ನಡುವೆ ತಮ್ಮ ಕನಸನ್ನು ಹಂಚಿಕೊಂಡರು. ಹಳೆಯ ದಿನಗಳನ್ನು ನೆನೆಸಿಕೊಂಡರು. ಹೊಸ ಭವಿಷ್ಯ ಆಸೆ ಬಿಚ್ಚಿಟ್ಟರು. 'ನಾನು ಮಾತಿಗೆ ಹೇಳುತ್ತಿಲ್ಲ, ನಿಜಕ್ಕೂ ನನ್ನನ್ನು ನಂಬಿ ಚಿತ್ರ ಮಂದಿರಕ್ಕೆ ಬಂದ ಜನರನ್ನು ಮೋಸ ಮಾಡುವುದಿಲ್ಲ. ಒಂದು ಒಳ್ಳೆ ಸಿನಿಮಾ ಮಾಡಿದ್ದಾನೆ ಎಂದು ಅವರು ಖಂಡಿತ ನನ್ನನ್ನು ಮೆಚ್ಚಿಕೊಳ್ಳುತ್ತಾರೆ' ಎಂದು ರೈ ಆತ್ಮ ವಿಶ್ವಾಸದಿಂದ ಈ ನಡುವೆ ನುಡಿದರು.
ಒಬ್ಬ ತಂದೆ ಮತ್ತು ಮಗಳ ನಡುವಿನ ಬಾಂಧವ್ಯವನ್ನು ವಿಭಿನ್ನ ರೀತಿಯಲ್ಲಿ ಕಟ್ಟಿ ಕೊಟ್ಟಿದ್ದೇನೆ. ಇನ್ನು ಹದಿನೈದು ದಿನದೊಳಗೆ ಚಿತ್ರ ಬಿಡುಗಡೆಯಾಗುತ್ತಿದೆ. ಅಷ್ಟರಲ್ಲಿ ಜನರನ್ನು ನನ್ನ ಚಿತ್ರ ನೋಡಲು ತಯಾರಿ ಮಾಡುತ್ತೇನೆ. ಅದಕ್ಕೆ ತಕ್ಕ ಪ್ರೋಮೊ ಮತ್ತು ಸಂದರ್ಶನಗಳು ಟಿವಿ ಮತ್ತು ಪತ್ರಿಕೆಗಳಲ್ಲಿ ಬರಲಿವೆ' ಎಂದರು ರೈ. ಅಷ್ಟರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ತಾನೇ ಒಂದು ಪಂದ್ಯ ಆಡಿ ಗೆದ್ದ ಅನುಭವ ಪ್ರಕಾಶ್ ರೈ ಮುಖದಲ್ಲಿ ಹೊಳೆಯುತ್ತಿತ್ತು.