ಗಣೇಶ್ ಅತ್ಯಂತ ಉಲ್ಲಾಸ ಉತ್ಸಾಹದಿಂದ ಚಿತ್ರದಲ್ಲಿ ನಟಿಸುತ್ತಾರೇನೋ ನಿಜ, ಆದರೆ ಯಾಕೋ ಅದು ಗೆಲ್ಲುತ್ತಿಲ್ಲ. ಸಾಲು ಸಾಲು ನೆಲಕಚ್ಚುತ್ತಿರುವ ಚಿತ್ರಗಳ ನಡುವೆ ಅವರ ನಿರೀಕ್ಷೆಯ ಚಿತ್ರವಾದ ಉಲ್ಲಾಸ ಉತ್ಸಾಹ ಕಂಡಿದೆ. ಇದರ ಹಿಂದೆ ಗಣೇಶರ ಸಾವಿರ ಕನಸುಗಳಿವೆ.
ಈ ಚಿತ್ರ ಗೆಲ್ಲಲು ಇಲ್ಲಿ ನಾಯಕ ನಟನ ಅಭಿನಯದ ಜತೆ ತೆಲುಗಿನಲ್ಲಿ ಕೆಲಸ ಮಾಡಿದ ಕನ್ನಡದ ಇಡೀ ತಂಡ ಜತೆಗಿದೆ. ಇಲ್ಲಿನವರೇ ಯಶಸ್ವಿಗೊಳಿಸಿದ ಚಿತ್ರ ಮರಳಿ ರಿಮೇಕ್ ರೂಪದಲ್ಲಿ ಇಲ್ಲಿಗೆ ಬಂದಿದೆ. ಅದನ್ನು ಜನ ಒಪ್ಪಿಕೊಳ್ಳಬೇಕಿದೆ ಅಷ್ಟೆ. ಈ ಚಿತ್ರದಲ್ಲಿ ಮತ್ತೊಮ್ಮೆ ಗಣೇಶ್ ಲವರ್ ಬಾಯ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದು ತೆಲುಗಿನ ಉಲ್ಲಾಸಂಗ ಉತ್ಸಾಹಂಗ ಚಿತ್ರದ ರಿಮೇಕ್. ಅಲ್ಲಿನ ಜನರ ನಾಡಿಮಿಡಿತ ಬಲ್ಲ ಕರುಣಾಕರನ್ ನಿರ್ದೇಶನದ ಚಿತ್ರ. ಕನ್ನಡದ ಹುಡುಗ ಯಶೋಸಾಗರ್ ಚೊಚ್ಚಲ ಚಿತ್ರದಲ್ಲೇ ಜನಮನ್ನಣೆ ಗಳಿಸಿದ ಚಿತ್ರವದು. ಕನ್ನಡದ್ದೇ ಹುಡುಗಿ ಸ್ನೇಹಾ ಉಲ್ಲಾಳ್ ನಾಯಕಿಯಾಗಿದ್ದರು.
ಇಲ್ಲೀಗ ಯಶೋಸಾಗರ್ ಚಿಕ್ಕಪ್ಪ ತ್ಯಾಗರಾಜ್ ಅವರೇ ಕನ್ನಡ ಚಿತ್ರವನ್ನು ನಿರ್ಮಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಚೂರು ಪಾರು ಹೆಸರು ಮಾಡಿರುವ ಯಾಮಿ ಗೌತಮಿ ನಾಯಕಿ. ಹಾಡುಗಳು ಈಗಾಗಲೇ ಹಿಟ್ ಆಗಿವೆ. ನಿರ್ದೇಶನದ ಜವಾಬ್ದಾರಿಯನ್ನು ದೇವರಾಜ್ ಪಾಲನ್‌ಗೆ ವಹಿಸಿದ್ದ ತ್ಯಾಗು, ಅವರ ಶ್ರಮ ಪ್ರತೀ ದೃಶ್ಯದಲ್ಲೂ ಕಾಣುತ್ತದೆ ಎನ್ನುತ್ತಿದ್ದಾರೆ. ಜಿ.ವಿ.ಪ್ರಕಾಶ್ ಕುಮಾರ್ ಸಂಗೀತವಿದ್ದು, ಜಿ.ಎಸ್.ವಿ.ಸೀತಾರಾಂ ಛಾಯಾಗ್ರಹಣ, ಪಿ.ಆರ್.ಸೌಂದರ್ ರಾಜ್ ಸಂಕಲನ, ಇಮ್ರಾನ್ ನೃತ್ಯ ಸಂಯೋಜನೆಯಿದೆ.
ಇನ್ನು ಕಾಮಿಡಿ ವಿಭಾಗದಲ್ಲಿ ರಂಗಾಯಣ ರಘು ಹಾಗೂ ಸಾಧು ಕೋಕಿಲಾ ಇದ್ದಾರೆ. ಉಳಿದಂತೆ ತುಳಸಿ ಶಿವಮಣಿ, ಪ್ರೀತಿ ಚಂದ್ರಶೇಖರ್, ದೊಡ್ಡಣ್ಣ, ವಿಶ್ವ, ಮಿತ್ರ ಮುಂತಾದವರಿದ್ದಾರೆ. ಗಣೇಶ್‌ಗೆ ಇಲ್ಲಾದರೂ ಲಕ್ಕು ಖುಲಾಯಿಸುತ್ತೋ ಕಾಯಬೇಕು.