ಈವರೆಗೆ ಚಲನಚಿತ್ರ ನೋಡುವ ಉಸಾಬರಿಗೇ ಹೋಗದ, ಮೂರು ಹೊತ್ತು ರಾಜಕೀಯ ರಾಜಕೀಯ ರಾಜಕೀಯವನ್ನೇ ಉಸಿರಾಡಿ ತಿಂದು ತೇಗುವ, ನಿದ್ದೆಯಲ್ಲೂ ರಾಜಕೀಯವನ್ನೇ ಉಸಿರಾಗಿಸಿರುವ ದೇವೇಗೌಡರಿಗೆ ಇದೀಗ ಸಿನಿಮಾ ನೋಡಬೇಕು ಅಂಥ ಮನಸ್ಸಾಗಿದೆ. ಅದಕ್ಕಾಗಿ ಭರ್ಜರಿ ತಯಾರಿಯನ್ನೂ ನಡೆಸಿರುವ ಗೌಡರು ಮೇ.1ರಂದು ಸಿನಿಮಾ ನೋಡಲಿದ್ದಾರೆ.
ಗೌಡರಿಗೇ ಕುತೂಹಲ ಹುಟ್ಟಿಸಿರುವ ಅಂಥಾ ಸಿನಿಮಾ ಯಾವುದಿರಬಹುದಪ್ಪಾ ಅಂತ ತಲೆಕೆರೆಯಬೇಡಿ. ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ನೋಡಬೇಕೆಂದುಕೊಂಡ ವಿಷ್ಣುವರ್ಧನ್ ಅಭಿನಯದ ಆಪ್ತರಕ್ಷಕ ಸಿನಿಮಾ ನೋಡುವ ಬಯಕೆ ಗೌಡರಿಗೂ ಆಗಿರಬಹುದೇನೋ ಅಂತ ಅಂತೆಕಂತೆಗಳ ಲೆಕ್ಕಾಚಾರ ಹೆಣೆಯಬೇಡಿ. ಖಂಡಿತಾ ಆಪ್ತರಕ್ಷಕ ಚಿತ್ರ ನೋಡುವ ಮನಸ್ಸಂತೂ ಗೌಡರು ಮಾಡಿಲ್ಲ. ಹಾಗಾದರೆ ಆ ಚಿತ್ರ ಯಾವುದು ಅಂತೀರಾ. ಉತ್ತರ ತುಂಬಾ ಸಿಂಪಲ್ ಕೇವಲ ಎರಡಕ್ಷರದ ಮಾಯೆ. ಅದೇ ಪೃಥ್ವಿ ಕಣ್ರೀ!
ಅರೆ ಪುನೀತ್ ಅಭಿನಯದ ಪೃಥ್ವಿ ನೋಡಲು ಗೌಡರಿಗೆ ಮನಸ್ಸಾಗಿದ್ದು ಯಾಕೆ ಅಂತೀರಾ. ಈ ಪ್ರಶ್ನೆಗೂ ಉತ್ತರ ತುಂಬಾ ಸಿಂಪಲ್ ಕಣ್ರೀ, ಇಲ್ಲೂ ಅದೇ ಎರಡಕ್ಷರದ ಮಾಯೆ ಗೌಡರನ್ನು ನಿದ್ದೆಗೆಡಿಸಿದೆ. ಅದೇ ಗಣಿ!!!
ಬಳ್ಳಾರಿ ಗಣಿಗಾರಿಕೆಯ ಕಥಾಹಂದರವಿರುವ ಪೃಥ್ವಿ ಚಿತ್ರ ಈಗ ಗೌಡಗ ನಿದ್ರೆಗೆಡಿಸಿದೆಯಂತೆ. ಹಾಗಾಗಿ ಖಂಡಿತಾ ಈ ಚಿತ್ರ ತಾನು ನೋಡಬೇಕು ಎಂದು ಗೌಡರು ತೀರ್ಮಾನಿಸಿಯೇ ಬಿಟ್ಟಿದ್ದಾರೆ. ಹಾಗಾಗಿ ಗೌಡರಿಗೆ ವಿಶೇಷ ಪ್ರದರ್ಶನವೂ ಶನಿವಾರ ನಡೆಯುತ್ತಿದೆ.
ಜೇಕಬ್ ವರ್ಗೀಸ್ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜಿಲ್ಲಾಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಪುನೀತ್‌ಗೆ ಜೋಡಿಯಾಗಿ ಪಾರ್ವತಿ ಮೋಡಿ ಮಾಡಿದ್ದಾರೆ. ಸೂರಪ್ಪ ಬಾಬು ಹಾಗ ಎನ್.ಎಸ್.ರಾಜ್ ಕುಮಾರ್ ನಿರ್ಮಾಣದ ಈ ಚಿತ್ರ ಗಣಿಗಾರಿಕೆಯ ವಿರುದ್ಧ ಧ್ವನಿಯೆತ್ತುವ ಚಿತ್ರವಾಗಿ ಹೊರಹೊಮ್ಮಿದ್ದು, ಇದು ಗೌಡರ ಕುತೂಹಲಕ್ಕೂ ಕಾರಣವಾಗಿದೆ. ಒಟ್ಟಾರೆ ಅಂತೂ ಗೌಡ್ರೂ ಸಿನಿಮಾ ನೋಡೋ ಕಾಲ ಬಂತು ಅಂತ ಗಾಂಧಿನಗರದಲ್ಲಿ ಮಾತಾಡಿಕೊಳ್ಳುತ್ತಿದ್ದಾರಂತೆ!