ಚೆಲುವೆ ನೋಡುವ ಯೋಗ ಸದ್ಯಕ್ಕಿಲ್ಲ, 'ತಮಸ್ಸು' ಶೀಘ್ರದಲ್ಲಿ!
PR
ಸಧ್ಯಕ್ಕಿಂತೂ ಚೆಲುವೆಯ ದರ್ಶನ ಭಾಗ್ಯ ಕನ್ನಡಿಗರಿಗಿಲ್ಲ. ಅರ್ಥಾತ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಚೆಲುವೆಯೇ ನಿನ್ನ ನೋಡಲು ಚಿತ್ರ ಸದ್ಯಕ್ಕಂತೂ ತೆರೆಕಾಣುವ ಲಕ್ಷಣವಿಲ್ಲ. ಬದಲಾಗಿ ಚೆಲುವೆಯೇ ನಿನ್ನ ನೋಡಲು ಚಿತ್ರದ ನಂತರ ಸೆಟ್ಟೇರಿದ ನಂತರ ಸೆಟ್ಟೇರಿದ ಅಗ್ನಿ ಶ್ರೀಧರ್ ನಿರ್ದೇಶನದ ಶಿವಣ್ಣ ಅಭಿನಯದ ಇನ್ನೊಂದು ಚಿತ್ರ ತಮಸ್ಸು ಮಾತ್ರ ಚೆಲುವೆಗಿಂತಲೂ ಮೊದಲು ತೆರೆಗೆ ಬರಲಿದೆ. ತಮಸ್ಸು ತೆರೆಕಂಡ ನಂತರದ ನಾಲ್ಕನೇ ವಾರದಲ್ಲಿ ಚೆಲುವೆ ಬರಲಿದ್ದಾಳೆ!
ಸೆಟ್ಟೇರಿದ ದಿನದಿಂದಲೂ ಒಂದಲ್ಲ ಒಂದು ಸುದ್ದಿಗೆ ಕಾರಣವಾಗುತ್ತಲೇ ಇದ್ದ ಚೆಲುವೆಯೇ ನಿನ್ನ ನೋಡಲು ಸದ್ಯದ ಬಹುನಿರೀಕ್ಷಿತ ಚಿತ್ರ. ಶಿವಣ್ಣ ತಮ್ಮ ಅಪ್ಪ ರಾಜ್ ಕುಮಾರ್ ಅವರ ವಿವಿಧ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದಲೋ, ಅಥವಾ ಜಗತ್ತಿನ ಏಳು ಅದ್ಭುತಗಳಲ್ಲಿ ಶೂಟಿಂಗ್ ನಡೆಸಿದ ಕೀರ್ತಿಯಿಂದಲೋ ಅಥವಾ ಭರ್ಜರಿ ಬಜೆಟ್ ಕಾರಣದಿಂದಲೋ... ಒಟ್ಟಾರೆ ಚೆಲುವೆ ಸಾಕಷ್ಟು ಸುದ್ದಿ ಮಾಡಿದ್ದಾಳೆ. ಹಾಗಾಗಿ ನಿರೀಕ್ಷೆಯೂ ಜೋರಾಗಿಯೇ ಇದೆ. ಆದರೆ ಎರಡರಲ್ಲೂ ಶಿವಣ್ಣ ಅವರ ತಾರಾಗಣವಿರುವ ಕಾರಣ ಎರಡೂ ಚಿತ್ರಗಳ ನಿರ್ಮಾಪಕರು ಒಪ್ಪಂದ ಮಾಡಿಕೊಂಡಿದ್ದು, ನಾಲ್ಕು ವಾರಗಳ ಅಂತರ ನೀಡುವ ನಿರ್ಣಯ ತೆಗೆದುಕೊಂಡಿದ್ದಾರೆ.
PR
ಮೂಲಗಳ ಪ್ರಕಾರ, ಅಗ್ನಿ ಶ್ರೀಧರ್ ನಿರ್ದೇಶನದ ತಮಸ್ಸು ಚಿತ್ರ ಮೇ ತಿಂಗಳಲ್ಲಿ ಬಿಡುಗಡೆ ಕಾಣಲಿದೆ. ತಮಸ್ಸು ಚಿತ್ರ ಕೋಮುಸೌಹಾರ್ದ ಸಂಬಂಧಿಸಿದ ಅಪರೂಪ ಕಥಾಹಂದರ ಹೊಂದಿದೆ ಎನ್ನಲಾಗಿದೆ. ಈಗಾಗಲೇ ಈ ಚಿತ್ರ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿದ್ದು, ಶಿವಣ್ಣ ಜೊತೆಗೆ ಪದ್ಮಪ್ರಿಯಾ ನಾಯಕಿಯಾಗಿ ನಟಿಸಿದ್ದಾರೆ. ಚೆಲುವೆಯೇ ನಿನ್ನ ನೋಡಲು ಚಿತ್ರದಲ್ಲಿ ಶಿವಣ್ಣ ಜೊತೆಗೆ ಸೊನಾಲ್ ಚೌಹಾಣ್ ನಟಿಸಿದ್ದಾರೆ. ಈ ಚಿತ್ರ ಈಗಾಗಲೇ ಅದ್ದೂರಿ ವೆಚ್ಚದಲ್ಲಿ ಪ್ರಪಂಚದ ಏಳು ಅದ್ಭುತಗಳನ್ನು ಸುತ್ತಿ ಚಿತ್ರೀಕರಿಸಿಕೊಂಡು ಬಂದಿದೆ. ಅತಿ ಎತ್ತರದ ಕಟ್ಟಡ ದುಬೈನ ಬುರ್ಚ್ ಖಲೀಫಾ ಕಟ್ಟದ ಸುತ್ತಮುತ್ತವೂ ಚಿತ್ರೀಕರಣ ನಡೆದಿದೆ. ಶಿವಣ್ಣ ಅಣ್ಣಾವ್ರ ಹತ್ತು ಹಲವು ಅವತಾರಗಳಲ್ಲಿ ಚಿತ್ರದಲ್ಲಿ ಮೈದಾಳಿದ್ದಾರೆ. ಈ ಚಿತ್ರಗಳೆಲ್ಲವೂ ಈಗ ಮಾಧ್ಯಮಗಳ ಮೂಲಕ ಸಾಕಷ್ಟು ಕುತೂಹಲವನ್ನೂ ಸೃಷ್ಟಿಸಿವೆ.
ತಮಸ್ಸು ಮೇ ತಿಂಗಳಲ್ಲಿ ತೆರೆ ಕಂಡರೆ ಚೆಲುವೆಯೇ ನಿನ್ನ ನೋಡಲು ಚಿತ್ರ ಬಿಡುಗಡೆ ಕಾಣಲು ಇನ್ನೂ ಒಂದು ತಿಂಗಳು ಕಾಲಾವಕಾಶ ಬೇಕು. ಹಾಗಾಗಿ ಜೂನ್‌ವರೆಗೂ ಚೆಲುವೆಯನ್ನು ನೋಡಲು ಸಾಧ್ಯವಿಲ್ಲ ಬಿಡಿ.