ಪ್ರೀತಿ ಕುರುಡು, ಪ್ರೇಮ ಹುಚ್ಚು ಅಂತೆಲ್ಲಾ ಜನ ಬಣ್ಣಿಸುವುದನ್ನು ಸಾಕಷ್ಟು ಕಂಡಿದ್ದೇವೆ ಕೇಳಿದ್ದೇವೆ. ಆದರೆ ಇಂತ ವಿಚಿತ್ರ ಪ್ರೇಮಿಯ ಬಗ್ಗೆ ಚಿತ್ರ ಮಾಡಲು ಹೊರಟವರನ್ನು ಕಂಡಿದ್ದೀರಾ?
ವಿಚಿತ್ರ ಅನ್ನಿಸಿದರೂ ಇದು ಸತ್ಯ. ಕನ್ನಡದಲ್ಲಿ "ವಿಚಿತ್ರ ಪ್ರೇಮಿ' ಹೆಸರಿನ ಚಿತ್ರ ಸದ್ಯವೇ ತೆರೆಗೆ ಬರಲಿದೆ. ಪ್ರೀತಿಗೆ ಸಂಬಂಧಿಸಿದ ಚಿತ್ರ ದಿನಕ್ಕೊಂದರಂತೆ ಬಿಡುಗಡೆ ಆಗುತ್ತಿದೆ. ಅದರಲ್ಲಿ ಇದೂ ಒಂದು ಅಂದುಕೊಂಡರೆ ತಪ್ಪಾಗುತ್ತದೆ. ಇದೊಬ್ಬ ಪ್ರೇಮಿಯ ಕತೆ. ಪ್ರೀತಿಯನ್ನು ಹುಡುಕುವ ಪ್ರೇಮಿ ಆತ. ನಾಯಕನ ಸುತ್ತ ಗಿರಕಿ ಹೊಡೆಯುವ ಕತೆಯನ್ನು ಚಿತ್ರವಾಗಿಸಿ ಪ್ರೇಕ್ಷಕರ ಕೈಗಿಡುವ ಯತ್ನ ಮಾಡಲಾಗುತ್ತಿದೆ.
ಇದರ ಧ್ವನಿಸುರುಳಿ ಬಿಡುಗಡೆ ಸಮಾರಂಭ ಇತ್ತೀಚೆಗೆ ನಗರದಲ್ಲಿ ನಡೆಯಿತು. ನಟಿ ಪೂಜಾ ಗಾಂಧಿ ಇದಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದರು. ಅವಸರದಲ್ಲಿ ಬಂದು ಸಿಡಿ ಬಿಡುಗಡೆ ಮಾಡಿ ತೆರಳಿದ ಅವರ ಬಳಿ ಪ್ರೀತಿಯ ಮಾತನ್ನು ಆಡಲು ಆಗಲೇ ಇಲ್ಲ. ಒತ್ತಾಯಿಸಿ ನಿಲ್ಲಿಸಿ ಮೇಡಂ ಏನಾದ್ರೂ ಹೇಳಲೇ ಬೇಕು ಅಂದಾಗ ಚುಟುಕಾಗಿ, "ಚಿತ್ರಕ್ಕೆ ಶುಭವಾಗಲಿ' ಎಂದು ದೊಡ್ಡದಾಗಿ ನಕ್ಕು ಹೊರಟೇ ಹೋದರು.
ಚಿತ್ರದ ಸಂಗೀತ ನಿರ್ದೇಶಕ ಗಂಧರ್ವ ಅವರು ಕಥೆ ಕುರಿತು ಹೇಳಿದ್ದಿಷ್ಟು. ನಾಯಕ ರವಿಗೆ ಸಿನಿಮಾ ಹುಚ್ಚು. ಚಿತ್ರದಲ್ಲಿ ಅಭಿನಯಿಸುವ ಹುಚ್ಚನ್ನು ಅವರು ಮನೆಯವರಿಗೆ ತಿಳಿಸದೇ ಮಾಡುತ್ತಾರೆ. ಕೇವಲ 20 ದಿನ ಚಿತ್ರೀಕರಣ ನಡೆದು ಆಮೇಲೆ ಪ್ಯಾಕಪ್ ಆಯಿತಂತೆ. ಸಿನಿಮಾದ ಮೇಲಿನ ಅಭಿಮಾನಕ್ಕೆ ನಾಯಕ ನಟ ರವಿಯೇ ಉಳಿದ ಹಣ ಹಾಕಿ ಚಿತ್ರ ತೆಗೆದಿದ್ದಾರಂತೆ.
ಇದು ಸಿನಿಮಾದ ಕಥೆ ಅಲ್ಲ. ಅಸಲಿ ಈ ಚಿತ್ರ ನಿರ್ಮಾಣಗೊಂಡುದರ ಹಿನ್ನೆಲೆ. ಸತ್ಯ ಘಟನೆಯನ್ನು ಹೊರಗೆಡವಿದ ಗಂಧರ್ವ ಅವರು ಇನ್ನೆರಡು ಸತ್ಯವನ್ನು ಹೊರಗೆಡವಿದ್ದಾರೆ. ಚಿತ್ರದ ನಾಯಕಿ ದಿವ್ಯ ಹಾಗೂ ನಿರ್ದೇಶಕ ಕುರುಡಿ ಬಣಕಾರ್. ಅವರಿಬ್ಬರೂ ಅಲ್ಲಿದ್ದರಾದರೂ, ಹೆಚ್ಚಿನ ಜನರಂತೆ ಅವರೂ ಮೌನವಾಗಿದ್ದರು.