ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ ಎನ್ನುವಂತೆ ಟಾಕೀಸ್‌ನಲ್ಲಿ 25 ದಿನ ಪೂರೈಸಿದ "ಪ್ರೇಮಿಸಂ' ಚಿತ್ರದ ಬಗ್ಗೆ ನಿರ್ದೇಶಕ ರತ್ನಜ ತಮ್ಮ ಬೆನ್ನನ್ನು ತಾವೇ ತಟ್ಟಿ ಕೊಂಡಿದ್ದಾರೆ.
ಹೌದು ಅವರ ಅಪಾರ ನಿರೀಕ್ಷೆಯ ಚಿತ್ರ ಪ್ರೇಮಿಸಂ 25 ದಿನ ಪೂರೈಸಿದೆ. 25ನೇ ದಿನದ ಪ್ರದರ್ಶನ ವೀಕ್ಷಿಸಲು ಅವರು ಮೈಸೂರಿಗೆ ತೆರಳಿದ್ದರು.
ಚಿತ್ರ ಮಂದಿರದಲ್ಲಿ ನಾಯಕ, ನಾಯಕಿಯ ಜತೆ ಕುಳಿತು ಮತ್ತೊಮ್ಮೆ ಚಿತ್ರ ವೀಕ್ಷಿಸಿದರು. ಒಂದು ರೀತಿ ಧನ್ಯತಾ ಭಾವದ ನಗು ನಕ್ಕರು. ಚಿತ್ರರಂಗದಲ್ಲಿ ಸೋಲು ಗೆಲುವು ಸಹಜ. ಒಂದು ಚಿತ್ರ ಬಿದ್ದರೆ, ಇನ್ನೊಂದು ಮೇಲೆತ್ತುತ್ತದೆ. ತಮ್ಮ ಮೊದಲ ಚಿತ್ರ "ನೆನಪಿರಲಿ' ಸಹ ಹೊಸ ಪ್ರಯೋಗವೇ ಅಗಿತ್ತು. ಆಗ ಜನ ಬಹುವಾಗಿ ಮೆಚ್ಚಿಕೊಂಡಿದ್ದರು. ನಂತರ ಬಂದ ಹೊಂಗನಸು ಬಗ್ಗೆ ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿದ್ದೆ. ಆದರೆ ಅದು ಕಚ್ಚಿಕೊಳ್ಳಲಿಲ್ಲ. ಮೂರನೇ ಪ್ರಯೋಗ ಪ್ರೇಮಿಸಂ ಯಶ ಕಂಡಿದೆ ಎಂದರು.
ಪ್ರೇಮಿಸಂನಲ್ಲಿನ ಕಥಾವಸ್ತು ಯುವಕರನ್ನು ಅಪಾರವಾಗಿ ಸೆಳೆದಿದೆ. ಇದರಿಂದ ಇಂದು ಚಿತ್ರ ಮಂದಿರಕ್ಕೆ ಜನ ಮುಗಿಬೀಳುತ್ತಿದ್ದಾರೆ. ಇದು ಚಿತ್ರದ ಯಶಸ್ಸಿಗೆ ಹಿಡಿದ ಕನ್ನಡಿ. ಇದರ ಯಶಸ್ಸಿನ ಹಿನ್ನೆಲೆಯಲ್ಲೇ ಮತ್ತೊಂದು ಚಿತ್ರ ತಕ್ಷಣಕ್ಕೆ ಮಾಡುವ ಉದ್ದೇಶ ನನಗಿಲ್ಲ. ಪ್ರತಿಚಿತ್ರಕ್ಕೂ ಕೆಲ ಕಾಲಾವಕಾಶ ಪಡೆಯುತ್ತೇನೆ. ಈಗಲೂ ಅಷ್ಟೆ ಎಂದು ನಸು ನಕ್ಕರು.
ನೆಚ್ಚಿನ ಸಂಗೀತ ನಿರ್ದೇಶಕ ಹಂಸಲೇಖ ಅವರು "ಬಾಗೀನ' ಮಾಡುವ ಆಸೆ ವ್ಯಕ್ತಪಡಿಸಿದ್ದು ಅದನ್ನು ನಿರ್ದೇಶಿಸುವ ಆಸೆ ಇದೆ. ಇದಲ್ಲದೇ "ಅಪರೂಪ' ಹಾಗೂ "ರಾಯಬಾರಿ' ನನ್ನ ಮುಂದಿನ ಎರಡು ಸಬ್ಜೆಕ್ಟ್‌ಗಳು. ಇದರಲ್ಲಿ ಯಾವುದು ಮೊದಲಾಗುವುದೋ ಗೊತ್ತಿಲ್ಲ. ನಾಯಕಿ ಅಮೂಲ್ಯ, ನಟರಾದ ಚೇತನ್‌ಚಂದ್ರ ಹಾಗೂ ವರುಣ್‌ಗೆ ಚಿತ್ರಕ್ಕೆ ಜನರಿಂದ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಪುಳಕವಾಗಿದೆಯಂತೆ. ಎಲ್ಲಾ ಶಿವಲೀಲೆ ಬಿಡಿ. ಒಟ್ಟಾರೆ ಕನ್ನಡ ಚಿತ್ರಗಳು ಹೆಚ್ಚೆಚ್ಚು ಯಶ ಕಂಡರೆ ಅಷ್ಟೇ ಸಾಕು.