ಆಪ್ತ ರಕ್ಷಕ ಅರ್ಧಶತಕ ಪೂರೈಸಿ 75ರ ಸಂಭ್ರಮದತ್ತ ಸಾಗಿದ್ದಾನೆ. ಚಿತ್ರ ನಿಜಕ್ಕೂ ಅತ್ಯುತ್ತಮವಾಗಿ ಓಡುತ್ತಿದೆ. ಚಿತ್ರದ ಓಟದ ಪರಿಯನ್ನು ಬಣ್ಣಿಸಲು ಸಾಧ್ಯವೇ ಇಲ್ಲ.
ಚಿತ್ರವನ್ನು 50 ಚಿತ್ರ ಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಚಿತ್ರ 60 ದಿನ ಪೂರೈಸುವ ಹೊತ್ತಿಗೆ ಚಿತ್ರ ಮಂದಿರದ ಸಂಖ್ಯೆ ಕಡಿಮೆ ಆಗುವ ಬದಲು 78ಕ್ಕೆ ಏರಿದೆ. ಚಿತ್ರದ 60 ದಿನದ ಆದಾಯ 25 ಕೋಟಿ ರೂ. ಮೀರಿದೆ. ಇಂಥದ್ದೊಂದು ಯಶಸ್ಸು ಕನ್ನಡದಲ್ಲಿ ಕಂಡು ಬಹುಕಾಲ ಅಗಿತ್ತು ಎನ್ನುತ್ತಿದೆ ಗಾಂಧಿನಗರ.
ವಿಷ್ಣುವರ್ಧನ್ ಅದ್ಬುತ ಅಭಿನಯ ಅವರಿಲ್ಲದ ಸಮಯವನ್ನು ಅತಿಯಾಗಿ ನೆನಪಿಸುತ್ತದೆ. ಇಷ್ಟೇ ಯಶಸ್ವಿಯಾಗಿ ಶತದಿನ ಪೂರೈಸಲಿದೆ ಎಂಬುದು ನಿರ್ಮಾಪಕ ಕೃಷ್ಣ ಪ್ರಜ್ವಲ್ ಅಭಿಪ್ರಾಯ ಕೂಡ.
ಈ ಚಿತ್ರ ಮರಳುಗಾಡಿನಲ್ಲಿ ಓಯಸಿಸ್ ಸಿಕ್ಕಂತೆ ಲಭಿಸಿದೆ. ಕನ್ನಡ ಚಿತ್ರ ಯಶಸ್ಸಿನ ಬರ ಎದುರಿಸುತ್ತಿದ್ದ ಸಂದರ್ಭದಲ್ಲಿ ಗೆದ್ದಿದೆ. ಹೀಗಿರುವಾಗ ಇದರ ಯಶಸ್ಸಿನಿಂದ ಲಭಿಸಿದ ಹಣವನ್ನು ಇನ್ನೊಂದು ಉತ್ತಮ ಕನ್ನಡ ಚಿತ್ರಕ್ಕೆ ಹೂಡಿಕೆ ಮಾಡುವುದಾಗಿ ಪ್ರಜ್ವಲ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿಯೂ ಕೆಲ ರಾಜಕೀಯ ನಡೆಯುತ್ತದೆ ಎನ್ನುವುದಕ್ಕೆ ಈ ಸಂತೋಷ ಕೂಟ ಸಾಕ್ಷಿಯಾಯಿತು. ಚಿತ್ರ ತೋಪೆದ್ದಾಗ ಯಾರೂ ಪತ್ರಕರ್ತರ ಮುಂದೆ ಬಂದು ಮಾತನಾಡುವುದೇ ಇಲ್ಲ. ಕೊನೆಪಕ್ಷ ಚಿತ್ರ ಗೆದ್ದಾಗಲಾದರೂ ಸಂತೋಷ ಹಂಚಿಕೊಳ್ಳಬಾರದೇ. ಆದರೆ ಇಂತದ್ದೊಂದು ಸಂತಸ ಇಲ್ಲಿ ಕಂಡು ಬರಲಿಲ್ಲ. ಲಕ್ಷ್ಮೀ ಗೋಪಾಲಸ್ವಾಮಿ ಹಾಗೂ ಅವಿನಾಶ್ ಮಾತ್ರ ಸಂತಸ ಹಂಚಿಕೊಳ್ಳಲು ಬಂದಿದ್ದರು. ಉಳಿದವರೆಲ್ಲಾ ನಾಪತ್ತೆ.
ಇದೇ ಸಂದರ್ಭದಲ್ಲಿ ಕೃಷ್ಣ ಪ್ರಜ್ವಲ್ ಇನ್ನೊಂದು ಮಾತು ಹೇಳಿದರು. ಚಿತ್ರ ತೆಲುಗಿಗೆ ಡಬ್ ಆಗುತ್ತಿದೆ. ಆಪ್ತರಕ್ಷಕುಡು ಹೆಸರಿನಲ್ಲಿ ಬಿಡುಗಡೆ ಆಗಲಿದೆ. ಹಿಂದಿಗೂ ತಾವೇ ಡಬ್ ಮಾಡಲಿದ್ದು, ನಟನಾಗಿ ಪಾಲ್ಗೊಳ್ಳುವಂತೆ ಅಕ್ಷಯ್ ಕುಮಾರ್ ಜತೆ ಮಾತುಕತೆ ನಡೆಸುತ್ತಿದ್ದೇನೆ. ಪಿ. ವಾಸು ಅವರೇ ಈ ಚಿತ್ರದ ನಿರ್ದೇಶಕ ಎಂದು ಘೋಷಿಸಿದರು. ಒಟ್ಟಾರೆ ಕನ್ನಡದಲ್ಲಿ ಕೊಂಚ ಉತ್ತಮ ದಿನಗಳು ಗೋಚರಿಸುತ್ತಿರುವುದಂತೂ ಸುಳ್ಳಲ್ಲ.