ರಮೇಶ್ ಅರವಿಂದ್ ಇದೀಗ ಕನ್ನಡದ ಗಂಡಂದಿರಿಗೆ ಹೊಸ ಪಾಠ ಹೇಳುತ್ತಿದ್ದಾರೆ. ಗಂಡಂದಿರೇ ಹುಷಾರ್.. ಎನ್ನುತ್ತಿದ್ದಾರೆ ರಮೇಶ್. ಹಾಗಾದ್ರೆ ರಮೇಶ್‌ಗೇನಾಯ್ತು ಅಂತ ತಲೆಕೆಡಿಸಿಕೊಳ್ಳಬೇಡಿ. ರಮೇಶ್, ಸಾಧು ಕೋಕಿಲ, ರಂಗಾಯಣ ರಘು ಸೇರಿ ಇದೀಗ ಹೆಂಡ್ತೀರ ದರ್ಬಾರು ಅನ್ನುತ್ತಾ ಗಾಂಧಿನಗರದಲ್ಲಿ ಸುದ್ದಿ ಮಾಡುತ್ತಿದ್ದಾರೆ. ಹೌದು. ಈ ತ್ರಿವಳಿಗಳು ಜನರನ್ನು ನಕ್ಕು ನಗಿಸಲು ಅತಿ ಶೀಘ್ರವೇ ಹೆಂಡ್ತೀರ್ ದರ್ಬಾರು ಚಿತ್ರದ ಮೂಲಕ ಬರುತ್ತಿದ್ದಾರೆ. ಇವರೊಂದಿಗೆ ಸಾಕಷ್ಟು ಹಾಸ್ಯ ಕಲಾವಿದರು ಚಿತ್ರದಲ್ಲಿದ್ದು, ನಾಯಕನಿಂದ ಖಳನಾಯಕನವರೆಗೆ ಎಲ್ಲರನ್ನೂ ಹಾಸ್ಯಕಲಾವಿದರನ್ನಾಗಿ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ.
ಹೆಂಡ್ತೀರ್ ದರ್ಬಾರ್ ಹೆಸರಿನ ಚಿತ್ರಕ್ಕೆ 'ಗಂಡಂದಿರೇ ಹುಷಾರ್...!' ಎಂಬ ಟ್ಯಾಗ್‌ಲೈನ್ ಸಹ ನೀಡಲಾಗಿದೆ. ನಕ್ಕು ನಗಿಸುವ ಮತ್ತೊಂದು ಚಿತ್ರ ಸಿದ್ಧವಾಗುತ್ತಿದೆ. ಚಿತ್ರದಲ್ಲಿ ಈ ಮೂಲಕ ಮ್ತತೊಮ್ಮೆ ರಮೇಶ್ ಜೊತೆಗೆ 'ಉಲ್ಟಾ ಪಲ್ಟಾ' ಚಿತ್ರದ ಅಳುಮುಂಜಿ ಸುಷ್ಮಾ ಬರಲಿದ್ದಾರೆ. ಮದುವೆಯಾಗಿ ಕೆಲ ತಿಂಗಳು ಹಾಯಾಗಿದ್ದ ಮೀನಾ ರಮೇಶ್ ಜೊತೆ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ. ಒಟ್ಟಾರೆ ಚಿತ್ರ ಬಿಡುಗಡೆಗೆ ಜನ ಕಾಯುತ್ತಿದ್ದು ಬಹಳ ನಿರೀಕ್ಷೆ ಹುಟ್ಟಿಸುತ್ತಿರುವುದು ಸುಳ್ಳಲ್ಲ.
ಚಿತ್ರವನ್ನು ಜಿ.ಆರ್. ಗೋಲ್ಡ್ ಫಿಲಂಸ್ ಹೊರತರುತ್ತಿದ್ದು, ಜಿ.ಆರ್. ಅವರೇ ನಿರ್ಮಾಪಕರು. ಕಥೆ, ಚಿತ್ರಕಥೆ, ನಿರ್ದೇಶನ ವಿ. ಶೇಖರ್ ಮಾಡಿದ್ದಾರೆ. ಸಾಧು ಕೋಕಿಲ ಸಂಗೀತ ನೀಡಿದ್ದು, ರಾಜು ಮಹೇಂದ್ರನ್ ಛಾಯಾಗ್ರಹಣ ಇದೆ. ಒಂದು ಉತ್ತಮ ಚಿತ್ರದ ನಿರೀಕ್ಷೆಯಲ್ಲಿ ಜನ ಇದ್ದಾರೆ. ಈ ಆಸೆ ಪೂರೈಸುವುದೇ ಕಾಯಬೇಕು.