ನಟಿ ಅಮೂಲ್ಯ ಮತ್ತೆ ಸ್ಕೂಲ್ ಯುನಿಫಾರಂ ತೊಟ್ಟಿದ್ದಾರೆ. ಚೆಲುವಿನ ಚಿತ್ತಾರದಲ್ಲಿ ಶಾಲಾ ಸಮವಸ್ತ್ರ ತೊಟ್ಟು ಮೋಡಿ ಮಾಡಿದ್ದ ಅಮೂಲ್ ಬೇಬಿ ಈಗ ನಾನು ನನ್ನ ಕನಸು ಚಿತ್ರದ ಮೂಲಕ ಮತ್ತೆ ಈ ದಿರಿಸಿಗೆ ಮರಳಿದ್ದಾರೆ. ಈ ಚಿತ್ರದಲ್ಲಿ ಒಬ್ಬ ಮಗಳಾಗಿ ಚಿತ್ರರಂಗದಲ್ಲಿ ವೈಭವಿಸಲಿದ್ದಾರೆ. ಕನ್ನಡದ ನಟ ಪ್ರಕಾಶ್ ರೈ ನಿರ್ದೇಶಕರಾಗಿ ತಮ್ಮದೇ ಜೀವನದ ಕತೆ ಚಿತ್ರವಾಗಿಸಲು ಹೊರಟಿದ್ದು ಚಿತ್ರದಲ್ಲಿ ರೈ ಮಗಳಾಗಿ ಅಮೂಲ್ಯ ಅಭಿನಯಿಸುತ್ತಿದ್ದಾರೆ.
ಎಸ್ಎಸ್ಎಲ್‌ಸಿ ಪಾಸ್ ಆಗಿ ಮುಂದೆ ಓದಿ, ಎಂಬಿಎ ಮುಗಿಸಿ ಕೊನೆಗೆ ಮದುವೆಯಾಗುವವರೆಗಿನ ಒಟ್ಟಾರೆ ಕಥೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ ಅಮೂಲ್ಯ. ಅತಿ ಶೀಘ್ರವೇ ಚಿತ್ರ ತೆರೆ ಕಾಣಲಿದ್ದು, ಮಗಳ ಪಾತ್ರದಲ್ಲಿ ಅಭಿನಯಿಸಿರುವ ಅಮೂಲ್ಯಗೆ ಇದೊಂದು ಮಹತ್ವದ ಪಾತ್ರವಂತೆ.
ಮನೆಯ ಮಗಳಾಗಿ ನಡೆದು ಕಂಡದ್ದೇ ಬೇರೆ, ಚಿತ್ರದಲ್ಲಿ ಮಗಳಾಗಿ ಅಭಿನಯಿಸುವುದೇ ಬೇರೆ. ಎರಡರಲ್ಲೂ ಸಾಕಷ್ಟು ಭಿನ್ನತೆ ಇದೆ ಎಂಬುದು ಅಮೂಲ್ಯ ಅಭಿಮತ. ನಾಯಕಿಯಾಗಿ ಭಡ್ತಿ ಪಡೆದ ನಂತರ ಮೂರ್ನಾಲ್ಕು ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿರುವ ಈಕೆಗೆ ನಾಯಕಿಯಾಗಿ ಇದು ಇನ್ನೊಂದು ಚಿತ್ರ ಆಗಿದ್ದರೂ, ಒಂದು ಸವಾಲಿನ ಪಾತ್ರವಾಗಿ ಲಭಿಸಿದ್ದಂತೂ ಸುಳ್ಳಲ್ಲ.
ನಾನು ನನ್ನ ಕನಸು ಚಿತ್ರದಲ್ಲಿ ನಟಿಸಿರುವ ಅಮೂಲ್ಯಾ ಆಡುವುದೇ ಇದೇ ಮಾತು, ಈ ಪಾತ್ರದಲ್ಲಿ ನಾನು ಸಾಕಷ್ಟು ತನ್ಮಯಳಾಗಿ ನಟಿಸಿದ್ದೇನೆ. ಉತ್ತಮ ಪಾತ್ರ ನೀಡಲಾಗಿದೆ. ಸವಾಲಾಗಿ ಸ್ವೀಕರಿಸಿ ಅಭಿನಯಿಸಿದ್ದೇನೆ. ಇದುವರೆಗೂ ಗಂಭೀರ ನಾಯಕಿಯ ಪಾತ್ರದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿರಲಿಲ್ಲ. ಇದೀಗ ಲಭಿಸಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದೇನೆ ಎಂಬ ಆತ್ಮವಿಶ್ವಾಸವಿದೆ' ಎನ್ನುತ್ತಾರೆ.