ಸ್ವಾಮಿ ನಿತ್ಯಾನಂದ ಅರ್ಥಾತ್ ಕಾಮಿಸ್ವಾಮಿ ಹೆಸರು ಕೇಳಿದರೆ ಎಲ್ಲರೂ ಮಾರು ದೂರ ಜಿಗಿಯುತ್ತಿರುವಾಗ ನಮ್ಮ ಸಾಧು ಕೋಕಿಲ ಮಾತ್ರ ಇನ್ನು ಹತ್ತಿರ ಹತ್ತಿರ ಅನ್ನುತ್ತಿದ್ದಾರಂತೆ. ಸಾಧು ಕೋಕಿಲಾಗೆ ಏನು ಬಂದು ಗಂಡಾಂತರ, ಹೋಗಿ ಹೋಗಿ ಕಾಮಿಸ್ವಾಮಿ ನೋಡಲು ತವಕಿಸುತ್ತಿದ್ದಾರೆ ಅಂತ ಜನ ಮೂಗು ಮುರಿಯುತ್ತಿದ್ದರೆ, ಸಾಧು ಮಾತ್ರ ಹೇಗಾದರೂ ಮಾಡಿ ಕಾಮಿಸ್ವಾಮಿಯನ್ನು ಕಾಣುವ ತವಕ ವ್ಯಕ್ತಪಡಿಸುತ್ತಿದ್ದಾರೆ.
ಅಯ್ಯೋ ಇದೇನು ಸ್ವಾಮಿಯ ಪಾದ ತೊಳೆದು ಪೂಜೆ ಸಲ್ಲಿಸಲಿಕ್ಕಲ್ಲ. ಆತನ ಗುಣಾವಗುಣ, ನಡವಳಿಗೆ, ಹಾವ ಭಾವ ತಿಳಿದುಕೊಳ್ಳಲು ಅಷ್ಟೆ. ಬಾಲಿವುಡ್ಡಿನಲ್ಲಿ ಈಗಾಗಲೇ ರಾಮ್ ಗೋಪಾಲ್ ವರ್ಮಾ ನಿತ್ಯಾನಂದನ ಬಗ್ಗೆ ಸಿನಿಮಾ ಮಾಡಲು ಹೊರಟಿರೋದು ಗೊತ್ತೇ ಇದೆ. ಅದೇ ರೀತಿ ನಮ್ಮ ಸ್ಯಾಂಡಲ್ ವುಡ್‌ನಲ್ಲಿ ಕಾಮಿಸ್ವಾಮಿಯನ್ನು ತರಲು ಸಾಧು ಯತ್ನಿಸುತ್ತಿದ್ದಾರೆ.
MOKSHA
ನಂಬಿದರೆ ನಂಬಿ ಬಿಟ್ಟರೆ ಬಿಡಿ, ಸಾಧು ಪಾಲಿಗೆ ಇದೊಂದು ಸವಾಲಿನ ಸಂಗತಿ ಮಾತ್ರವಲ್ಲ, ಸತ್ವ ಪರೀಕ್ಷೆಯೂ ಹೌದಂತೆ. ಏಕೆಂದರೆ ಸಾಧು ಕೋಕಿಲಾ ಕಾಮಿಸ್ವಾಮಿ ಚಿತ್ರದ ಮೂಲಕ ನಿರ್ಮಾಣ ಕ್ಷೇತ್ರಕ್ಕೂ ಧುಮುಕಲು ಯತ್ನಿಸುತ್ತಿದ್ದಾರೆ. ಇದಕ್ಕಾಗಿಯೇ ಇಷ್ಟೆಲ್ಲಾ ಪ್ರಿಪರೇಷನ್ನು! ಸಾಧು ಅಂದುಕೊಂಡಂತೆ ಎಲ್ಲವೂ ಸುಸೂತ್ರವಾಗಿ ನೆರವೇರಿದರೆ ಮುಂದಿನ ಮೂರು ತಿಂಗಳ ಒಳಗೆ ಚಿತ್ರ ಸೆಟ್ಟೇರಲಿದೆಯಂತೆ.
ಆದರೆ ಇದು ಕೇವಲ ನಿತ್ಯಾನಂದನ ರಾಸಲೀಲೆಯ ಚಿತ್ರ ಅಲ್ಲವಂತೆ, ದನದಾಹಿ ಐವರು ಸ್ವಾಮಿಗಳ ಕಥೆಯಂತೆ. ಇವರೆಲ್ಲಾ ಒಂದು ಮನೆಯನ್ನು ಪ್ರವೇಶಿಸಿ ಮಧ್ಯರಾತ್ರಿ ತಿಜೋರಿ ಒಡೆಯಲು ಸಂಚು ರೂಪಿಸುವುದು, ಹಾಗೂ ಹಣವನ್ನು ಅಲ್ಲಿಂದ ಬೆಳಗಾಗುವುದರ ಒಳಗೆ ಲಪಟಾಯಿಸುವುದು ಚಿತ್ರದ ಕಥೆಯಂತೆ. ಚಿತ್ರವನ್ನು ಸಂಪೂರ್ಣ ಹಾಸ್ಯಮಯವಾಗಿ ಜನರಿಗೆ ಕಟ್ಟಿಕೊಡುವ ಯತ್ನದಲ್ಲಿ ಸಾಧು ನಿರತರಾಗಿದ್ದಾರೆ.
ಐದು ಸ್ವಾಮಿಗಳ ಪಾತ್ರವರ್ಗವೂ ಫೈನಲ್ ಆಗಿದೆ. ಒಬ್ಬ ಸಾಧು, ಇನ್ನುಳಿದ ನಾಲ್ವರ ಪಾತ್ರದಲ್ಲಿ ರಂಗಾಯಣ ರಘು, ಬುಲೆಟ್ ಪ್ರಕಾಶ್, ಕೋಮಲ್ ಹಾಗೂ ದಿಗಂತ್ ಅಂತೆ. ಹಾಂ, ಅಂದಹಾಗೆ ಚಿತ್ರದ ಹೆಸರು 'ಸ್ವಾಮೀಜಿ'. ಚಿತ್ರಕ್ಕೆ ಒಂದು ಟ್ಯಾಗ್‌ಲೈನ್ ಕೂಡಾ ಇದೆ. ಅದು 'ನಿತ್ಯಾನಂದ'!