ಮಕ್ಕಳು ಮೆಚ್ಚುವುದು ಪ್ರಾಣಿಗಳನ್ನು ಅನ್ನುವುದರಲ್ಲಿ ಎರಡು ಮಾತಿಲ್ಲ. ನಡವಳಿಕೆಯಲ್ಲಿ ಮಾನವನಿಗೆ ಅತ್ಯಂತ ಹತ್ತಿರವಾಗಿರುವ ಪ್ರಾಣಿ ಚಿಂಪಾಂಜಿ. ಇದರ ನಡವಳಿಕೆಯೆಲ್ಲಾ ಮನುಷ್ಯರಂತೆಯೇ ಇರುತ್ತದೆ. ಹೀಗಾಗಿ ಇದನ್ನೇ ಚಿತ್ರವಾಗಿಸಬಾರದೇಕೆ ಎಂದುಕೊಂಡ ಸ್ಯಾಂಡಲ್‌ವುಡ್ ನಿರ್ಮಪಕರೊಬ್ಬರು ಸಾಹಸವನ್ನು ಕೈಗೆತ್ತಿಕೊಂಡಿದ್ದು ಗೊತ್ತೇ ಇದೆ. ಇದರ ಫಲವೇ 'ಅಪ್ಪು ಪಪ್ಪು'. ಚಿಂಪಾಂಜಿ ಹಾಗೂ ಹುಡುಗನೊಬ್ಬನ ನಡುವೆ ಹೆಣೆದ ಕಥೆ ಇದು. ಚಿತ್ರದ ತುಂಬಾ ಇವರ ಸ್ನೇಹ, ಆತ್ಮೀಯತೆ, ಪ್ರೀತಿ, ಕುಕ್ಕುಲತೆ ಹಾಗೂ ಮಾನವೀಯತೆಯೇ ಹೆಚ್ಚಾಗಿ ಕಂಡು ಬರುತ್ತದಂತೆ. ಚಿತ್ರದ ಇನ್ನೊಂದು ವಿಶೇಷ ಅಂದರೆ ಚಿಂಪಾಂಜಿಯೂ ಮಾತನಾಡುತ್ತದೆ!
ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಬಾಂಧವ್ಯವನ್ನು ಇಲ್ಲಿ ತೋರಿಸಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಅನಂತರಾಜು. ಶೂಟಿಂಗ್ ಕಾರ್ಯ ಗೋವಾದಲ್ಲಿ ಭರದಿಂದ ಸಾಗಿದೆ. ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ, ಆಧುನಿಕ ಡಿಜಿಟಲ್ ತಂತ್ರಜ್ಞಾನದ ಸಹಾಯ ಪಡೆದು ಚಿತ್ರ ಸಿದ್ಧಪಡಿಸಲಾಗಿದೆ. ಚಿಂಪಾಂಜಿ ಧ್ವನಿಗೆ ರಾಯಲ್ ಟಚ್ ನೀಡಿರುವುದು ಚಿತ್ರದ ಇನ್ನೊಂದು ವಿಶೇಷ.
ಕೇರಳದ ಹುಡುಗ ಪ್ರತಿಜ್ಞಾಂ ಚಿಂಪಾಜಿಗೆ ದನಿ ನೀಡಿದ್ದಾರೆ. ಪ್ರಾಣಿಗಳ ಧ್ವನಿಯನ್ನು ಚೆನ್ನಾಗಿ ಅನುಕರಣೆ ಮಾಡುವ ಇವರು ಒಬ್ಬ ಉತ್ತಮ ಮಿಮಿಕ್ರಿ ಕಲಾವಿದ ಕೂಡ. ವಿಮಾನ ಹೇಗೆ ಲ್ಯಾಂಡ್ ಆಗುತ್ತೆ ಎನ್ನುವುದನ್ನು ಇವರು ಮಿಮಿಕ್ರಿ ಮೂಲಕ ತೋರಿಸುತ್ತಿದ್ದರೆ, ಅಸಲಿ ವಿಮಾನವೇ ಎಲ್ಲೋ ಇಳಿಯುತ್ತಿದೆಯೇನೋ ಅಂತ ಭಾಸವಾಗುತ್ತದೆ.
ಇವರು ಕನ್ನಡದ ಇನ್ನೊಂದು ಚಿತ್ರ ಜೋಶ್‌ನಲ್ಲಿ ಈಗಾಲೇ ರೋಬೋ ಗಣೇಶ್‌ಗೆ ಧ್ವನಿ ನೀಡಿದ್ದರು. ಅತ್ಯಂತ ಆಸಕ್ತಿ ಕೆರಳಿಸಿರುವ ಅಪ್ಪು ಪಪ್ಪು ಅತಿ ಶೀಘ್ರವೇ ತೆರೆಯ ಮೇಲೆ ಬರಲಿದ್ದು, ಮಕ್ಕಳನ್ನು ರಂಜಿಸುವಲ್ಲಿ ಮೋಸ ಮಾಡುವುದಿಲ್ಲ ಅನ್ನಲಾಗುತ್ತಿದೆ.