ಅರ್ಜುನ್ ಸರ್ಜಾ ಕುಟುಂಬದ ಒಂದೊಂದೇ ಕುಡಿ ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕವನ್ನು ಪ್ರವೇಶ ಮಾಡುತ್ತಿದೆ. ವಾಯುಪುತ್ರ ಚಿತ್ರದ ಮೂಲಕ ಚಿರಂಜೀವಿ ಸರ್ಜಾ ಎಂಟ್ರಿ ಕೊಟ್ಟಾಗಿದೆ. ಇದೀಗ ಅವರ ಮಾರ್ಗದಲ್ಲೇ ಅವರ ಸಹೋದರ ದ್ರುವ ಸರ್ಜಾ ಬಣ್ಣ ಬಳಿದುಕೊಂಡು ಬರಲು ಅಣಿಯಾಗುತ್ತಿದ್ದಾರೆ. ಅದೂ ಕೂಡಾ ಭಾರೀ ಅದ್ದೂರಿಯಾಗಿ!
ಹೌದು. ಧ್ರುವ ಸರ್ಜಾ ನಟಿಸಲಿರುವ ಚಿತ್ರದ ಹೆಸರೇ 'ಅದ್ದೂರಿ'! ಈ ಮೂಲಕ ಸರ್ಜಾ ಕುಟುಂಬದ ಇನ್ನೊಂದು ಕುಡಿಯೂ ಚಿತ್ರರಂಗ ಪ್ರವೇಶಿಸಿದಂತೆ ಆಗಲಿದೆ. ಈ ಚಿತ್ರದ್ಲಲಿ ಧ್ರುವನಿಗೆ ನಾಯಕಿಯಾಗಿ ರಾಧಿಕಾ ಪಂಡಿತ್ ಆಯ್ಕೆಯಾಗಿದ್ದಾರೆ. ರಾಧಿಕಾ ಪಂಡಿತ್ ಈವರೆಗೆ ನಟಿಸದಂತಹ ಡಿಫರೆಂಟ್ ಲುಕ್ ಮೂಲಕ ಈ ಚಿತ್ರದಲ್ಲಿ ಕಾಣಿಸಲಿದ್ದಾರಂತೆ. ಚಿತ್ರದ ಇನ್ನೊಂದು ವಿಶೇಷ ಅಂದರೆ ಈ ಚಿತ್ರಕ್ಕೆ ಅಂಬಾರಿ ಚಿತ್ರದ ಯಶಸ್ವಿ ನಿರ್ದೇಶಕ ಅರ್ಜುನ್ ನಿರ್ದೇಶಕರಾಗಿರುವುದು. ಅಂಬಾರಿ ಯಶಸ್ಸಿನ ಅರ್ಜುನ್ ಅಂದ ಮೇಲೆ ಚಿತ್ರರಂಗಕ್ಕೆ ಧ್ರುವ ಪ್ರವೇಶ ಭರ್ಜರಿಯಾಗಿಯೇ ಆಗಲಿದೆ ಎಂಬುದರಲ್ಲಿ ಸಂಶಯವಿಲ್ಲ.
ಅರ್ಜುನ್ ಪುನಿತ್ ಅಭಿನಯದ ಚಿತ್ರವೊಂದನ್ನು ನಿರ್ದೇಶಿಸುತ್ತಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಕಳೆದ ಕೆಲದಿನದಿಂದ ಸುತ್ತುತ್ತಲೇ ಇತ್ತು. ಆದರೆ ಅದೇನಾಯಿತೋ ಗೊತ್ತಿಲ್ಲ. ಸದ್ಯ ಸರ್ಜಾ ಕುಟುಂಬದ ಕುಡಿಯನ್ನು ಪರಿಚಯಿಸಲು ಅರ್ಜುನ್ ರಥವೇರಿದ್ದಾರೆ. ಛಾಯಾಗ್ರಹಣಕ್ಕೆ ಕೃಷ್ಣ ಆಯ್ಕೆಯಾಗಿದ್ದು, ಚಿತ್ರ ಮೇ 10ರಂದು ಸೆಟ್ಟೇರಲಿದೆ.
ಅಂದ ಹಾಗೆ, ಧ್ರುವ ಸರ್ಜಾ ಒಬ್ಬ ಬಾಡಿ ಬಿಲ್ಡರ್. ಸದ್ಯ್ಕಕೆ ಮ್ಯೂಸಿಕ್ ಬ್ಯಾಂಡ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಧ್ರುವ ಸರ್ಜಾ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವ ಉದ್ದೇಶ ಸ್ವತಃ ಅರ್ಜುನ್ ಸರ್ಜಾರದ್ದು. ಆದರೂ, ಅರ್ಜುನ್ ಸರ್ಜಾ ಅವರಿಗೆ ತಮ್ಮ ಅಳಿಯ ಧ್ರುವನನ್ನು ತಮ್ಮದೇ ಕುಟುಂಬದ ನಿರ್ಮಾಣದ ಬ್ಯಾನರಿನಡಿ ಪರಿಚಯಿಸುವ ಉದ್ದೇಶವಿತ್ತಾದರೂ, ನಿರ್ದೇಶಕ ಅರ್ಜುನ್ ಅವರ ಕಥೆ ಕೇಳಿ ಇಂಪ್ರೆಸ್ ಆಗಿ ಆ ಮೂಲಕವೇ ಧ್ರುವನ ಪಾದಾರ್ಪಣೆಯಾಗಲಿ ಎಂದು ಶುಭಾರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದರಂತೆ. ಎಲ್ಲರ ಕೃಪಾಕಟಾಕ್ಷವೂ ಇದ್ದ ಮೇಲೆ ಅಣ್ಣ ಚಿರಂಜೀವಿ ಸರ್ಜಾನಂತೆ ಶೈನ್ ಆಗಲು ಹೊರಟಿರುವ ಧ್ರುವ ಸರ್ಜಾರ ಲಕ್ಕು ಖುಲಾಯಿಸಲಿದೆಯೇ ಎಂಬುದಕ್ಕೆ ಕಾಲವೇ ಉತ್ತರ ಹೇಳಬೇಕು.