ಬೇಸಿಗೆ ರಜೆ ಆರಂಭವಾಗಿದೆ. ಮಕ್ಕಳಿಗೆ ಆಟವಾಡಿಕೊಂಡಿರಲು ಇದು ಸಕಾಲ. ಸಾಯಂಕಾಲ ಮಕ್ಕಳಿಗೆ ಮನರಂಜನೆ ಹಾಗೂ ಒಂದು ನೀತಿ ಪಾಠ ಹೇಳುವ ಮಾದರಿಯ ಸಿನಿಮಾ ತೋರಿಸುವ ಹಂಬಲ ಉಳ್ಳವರಿಗಾಗಿ ಹಲವು ಚಿತ್ರಗಳು ನಿರ್ಮಾಣಗೊಳ್ಳುತ್ತಿರುತ್ತವೆ. ಅವುಗಳ ಪಟ್ಟಿಗೆ ಈ ವರ್ಷ ಸದ್ಯವೇ ಎರಡು ಚಿತ್ರ ಸೇರ್ಪಡೆ ಆಗುತ್ತಿದೆ. ಅದು ರಾಮ್ ನಾರಾಯಣ್ ಅವರ ಬೊಂಬಾಟ್ ಕಾರ್ ಹಾಗೂ ಮಾ. ಚಿರಂಜೀವಿ ಅಭಿನಯದ ಏಕಮೇವ.
ಬೊಂಬಾಟ್ ಕಾರ್ ಚಿತ್ರ ಸಂಪೂರ್ಣ ಸಿದ್ಧವಾಗಿದ್ದು, ಸದ್ಯವೇ ತೆರೆಗೆ ಬರಲಿದೆ. ಬಾಲಕನ ಸಾಹಸ, ರೋಬೋಟ್ ಮಾಯೆ ಹಾಗೂ ದುಷ್ಟ ಶಕ್ತಿಗಳ ಆರ್ಭಟ ಈ ಚಿತ್ರದ ಹೈಲೈಟ್. ದೊಡ್ಡಣ್ಣ, ಶರಣ್ ಮುಂತಾದ ನಟರ ಬಳಗವೇ ಚಿತ್ರದಲ್ಲಿದೆ. ತಂದೆ ತಾಯಿಯ ಆತಂಕ ದುಗುಡ, ದುಷ್ಟ ಶಕ್ತಿಯ ಆರ್ಭಟ ನರ್ತನ ಹಾಗೂ ಪುಟ್ಟ ಬಾಲಕನ ಸಾಹಸ, ಅದಕ್ಕೆ ಆಧುನಿಕ ತಂತ್ರಜ್ಞಾನದ ಆವಿಷ್ಕಾರವಾದ ರೋಬೋಟ್ ಹಾಗೂ ಕಾರ್ನ ಸಹಕಾರ. ಇವಿಷ್ಟು ಚಿತ್ರದ ತಿರುಳು.
ಚಿತ್ರದ ನಿರ್ಮಾಣವನ್ನು ಎನ್. ರಾಧಾ ಹೊತ್ತಿದ್ದಾರೆ. ಸಂಗೀತವನ್ನು ದೇವ ನೀಡಿದ್ದಾರೆ. ಶ್ರೀ ತೇನಾಂಡಾಲ್ ಫಿಲಂಸ್ ಈ ಚಿತ್ರವನ್ನು ಹೊರ ತರುತ್ತಿದೆ. ಇದೇ ರೀತಿ ಬರಲಿರುವ ಇನ್ನೊಂದು ಚಿತ್ರ ಏಕಮೇವ. ಇದರ ದ್ವನಿ ಸುರುಳಿ ಇತ್ತೀಚೆಗೆ ಮಾರುಕಟ್ಟೆ ಪ್ರವೇಶಿಸಿದ್ದು, ಚಿತ್ರವೂ ಶೀಘ್ರ ತೆರೆ ಕಾಣಲಿದೆಯಂತೆ. ಹುಟ್ಟು ಸಾವಿನ ನಡುವೆ ಎಂಬ ಸಬ್ ಟೈಟಲ್ ಒಳಗೊಂಡ ಈ ಚಿತ್ರದಲ್ಲಿ ಮಾ. ಚಿರಂಜೀವಿ ಅಭಿನಯಿಸಿದ್ದಾರೆ. ಪ್ರವೀಣ್ ಕುಮಾರ್ ಕೊಂಚಾಡಿ ನಿರ್ಮಾಪಕ ಹಾಗೂ ನಿರ್ದೇಶಕರು. ಸಲೀಂ ಪುತ್ತೂರು ಸಾಹಿತ್ಯ ಹಾಗೂ ಸಂಗೀತದ ಹೊಣೆ ಹೊತ್ತಿದ್ದಾರೆ. ಇವೆರಡಕ್ಕೂ ಕಾಯುವ ಮಕ್ಕಳಿಗೆ ಸಕತ್ ಮನರಂಜನೆ ಸಿಗಲಿ ಎಂದೇ ಹಾರೈಸೋಣ.