ಹೊಸಾ ಗಾನ ಬಜಾನಾ ಜನರನ್ನು ರಂಜಿಸಲು ಬರುತ್ತಿದೆ. ಇದೇನಿದು, ಗಾನಾ ಬಜಾನಾ ಹಾಡಿನ ಮೂಲಕ ಪುನೀತ್ ರಂಜಿಸುತ್ತಿದ್ದಾರಲ್ಲ, ಇನ್ಯಾವ ಹೊಸ ಗಾನಾ ಬಜಾನಾ ಎಂದು ತಲೆಕೆಡಿಸಬೇಡಿ. ಪುನೀತ್ ಹಾಗೂ ಪ್ರಿಯಾಮಣಿ ಜೋಡಿ ಸೃಷ್ಟಿಸಿದ ಗಾನಾ ಬಜಾನ ಹಾಡಿನ ಹವಾಕ್ಕೆ ಮನಸೋತು ಇದೀಗ ಅದೇ ಹಾಡಿನ ಹೆಸರಿನಲ್ಲಿ ಚಿತ್ರವೊಂದು ಹೊರಬರಲಿದೆ.
ಹೌದು. ಇಲ್ಲಿ ನಾಯಕ ನೃತ್ಯ ಶಿಕ್ಷಕ. ನಾಯಕಿ ಶಿಷ್ಯೆ. ಇವರ ನಡುವೆ ಪ್ರೇಮಾಂಕುರ ಆಗುವುದೇ ಚಿತ್ರಕಥೆ. ಇಷ್ಟೇನಾ! ಅಂತ ಮೂಗೆಳೆಯಬೇಡಿ. ಇಷ್ಟರಲ್ಲೇ ಎಷ್ಟೋ ಸತ್ಯಾಸತ್ಯತೆಯನ್ನು ಕಟ್ಟಿಕೊಡುವ ಯತ್ನವನ್ನು ಈ ಚಿತ್ರತಂಡ ಮಾಡಿದೆಯಂತೆ. ಈಗಾಗಲೇ ಲವ್‌ಗುರು ಎಂಬ ಚಿತ್ರ ಮಾಡಿ ಯುವ ಪೀಳಿಗೆಯ ಮನಗೆದ್ದ ನಿರ್ದೇಶಕ ಪ್ರಶಾಂತ್ ಈ ಚಿತ್ರ ನಿರ್ದೇಶಿಸಲು ಹೊರಟಿದ್ದಾರೆ. ಯುವ ಮನಸ್ಸುಗಳನ್ನು ಕೇಂದ್ರೀಕರಿಸಿಕೊಂಡು ಈ ಚಿತ್ರ ಮಾಡಲಾಗಿದ್ದು, ನಿಜಕ್ಕೂ ಪ್ರೇಮಕಥೆ ಹೇಗಿರಬೇಕು ಎನ್ನುವುದನ್ನು ತೋರಿಸಿಕೊಡುತ್ತದೆ ಎಂಬುದು ಚಿತ್ರತಂಡದ ಮಾತು.
ಅಂದಹಾಗೆ ಇಲ್ಲಿಯೂ ಲವ್‌ಗುರು ತಂಡದ ನಾಯಕ ನಾಯಕಿಯರೇ ಸ್ಥಾನ ಪಡೆದಿದ್ದಾರೆ. ತರುಣ್ ಹಾಗೂ ರಾಧಿಕಾ ಪಂಡಿತ್ ಜೋಡಿಯ ಈ ಚಿತ್ರದಲ್ಲಿ ನಾಯಕಿ ನಾಯಕನ ಅಭಿಮಾನಿ ಹಾಗೂ ಶಿಷ್ಯೆಯಂತೆ. ಕೊಂಚ ಬೋಲ್ಡ್ ಹಾಗೂ ಬಿಂದಾಸ್ ಪಾತ್ರ ರಾಧಿಕಾರದ್ದು. ಮೊಗ್ಗಿನ ಮನಸು ಚಿತ್ರದಲ್ಲಿ ಹೆಸರು ಮಾಡಿದ ರಾಧಿಕಾ ಈಗಾಗಲೇ ತನ್ನ ನಟನೆಯ ಮೂಲಕ ಒಲವೇ ಜೀವನ ಲೆಕ್ಕಾಚಾರ, ಲವ್‌ಗುರು ಚಿತ್ರಗಳಲ್ಲಿ ಭರವಸೆ ಮೂಡಿಸಿದ್ದು, ಸದ್ಯ ಬಹು ನಿರೀಕ್ಷಿತ ಕೃಷ್ಣನ್ ಲವ್ ಸ್ಟೋರಿಯಲ್ಲೂ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ.
ಶೇಖರ್ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಒಟ್ಟಾರೆ ಎಲ್ಲರ ಸಾಹಸದ ಫಲವೇ ಈ ಚಿತ್ರ. ಒಮ್ಮೆ ನೋಡಲೇ ಬೇಕೆನ್ನುವ ರೀತಿ ಸಿದ್ಧಪಡಿಸಿದ್ದೇವೆ. ಜನ ಇದನ್ನು ಮೆಚ್ಚುವಲ್ಲಿ ಸಂಶಯವೇ ಇಲ್ಲ. ಇದೊಂದು ಸಾಮಾನ್ಯ ಪ್ರೇಮ ಕಥೆಯದರೂ, ವಿಭಿನ್ನವಾಗಿ ನೀಡುವ ಪ್ರಯತ್ನ ಮಾಡಿದ್ದೇವೆ. ಚಿತ್ರದ ಯಶಸ್ಸಿಗೆ ಎಲ್ಲರೂ ಶ್ರಮಿಸಿದ್ದಾರೆ ಎನ್ನುವುದು ನಿರ್ದೇಶಕರ ಮಾತು.
ಒಟ್ಟಾರೆ ಏನೇ ಇರಲಿ. ಚಿತ್ರ ಶೀಘ್ರವೇ ತೆರೆಯ ಮೇಲೆ ಬರಲಿದೆ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ಗಾನಾ ಬಜಾನ ಮತ್ತೆಮ್ಮೆ ಜನರನ್ನು ಮೋಡಿ ಮಾಡುವುದೋ ಕಾಯಬೇಕು.