ಕ್ರೇಜಿ ಸ್ಟಾರ್ ರವಿಚಂದ್ರನ್ ನಿರ್ದೇಶನ ಹಾಗೂ ನಟನೆಯ ಬಹುನಿರೀಕ್ಷಿತ ಹೂ ಚಿತ್ರ ಕೊನೆಗೂ ಇದೇ ಮೇ ತಿಂಗಳ 28ರಂದು ಬಿಡುಗಡೆಗೊಳ್ಳಲಿದೆ. ದಕ್ಷಿಣ ಭಾರತದ ಹಾಟ್ ನಟಿ ನಮಿತಾ ಹಾಗೂ ಮೀರಾ ಜಾಸ್ಮಿನ್ ಅಭಿನಯದ ಈ ಚಿತ್ರ ಈಗಾಗಲೇ ಪಡ್ಡೆ ಹುಡುಗರ ನಿದ್ದೆಗೆಡಿಸಿತ್ತು. ಬಹುಶಃ ಅದಕ್ಕೆ ನಮಿತಾ ಕಾರಣ ಇರಬಹುದು, ಅಷ್ಟೇ ಅಲ್ಲ, ರವಿಚಂದ್ರನ್ ಚಿತ್ರ ಎಂಬುದೂ ಕೂಡಾ ಕಾರಣವಿದ್ದೀತು. ಜೊತೆಗೆ ಚಿತ್ರದ ಸ್ಟಿಲ್‌ಗಳೂ ಈಗಸಾಕಷ್ಟು ಕುತೂಹಲ ಕೆರಳಿಸಿವೆ.
ತೆಲುಗಿನ ವಸಂತಂ ಎಂಬ ಹಿಟ್ ಚಿತ್ರದ ರಿಮೇಕ್ ಅವತರಣಿಕೆಯಾಗಿರುವ ಹೂ ಚಿತ್ರಕ್ಕೆ ಹರಿಕೃಷ್ಣ ಸಂಗೀತವಿದೆ. ರವಿ ಅವರ ಖಾಯಂ ಛಾಯಾಗ್ರಾಹಕ ಸಿ.ಎಸ್.ಸೀತಾರಾಂ ಅವರ ಛಾಯಾಗ್ರಾಹಣವಿದೆ. ಆದರೆ ರವಿ ಹೇಳುವಂತೆ, ಇದು ಪಕ್ಕಾ ರಿಮೇಕ್ ಚಿತ್ರವಲ್ಲ. ವಸಂತಂ ಚಿತ್ರದ ಸಣ್ಣ ಎಳೆಯೊಂದನ್ನು ಹಿಡಿದು ಬೇರೆಯೇ ಕಥೆ ಹೆಣೆಯಲಾಗಿದೆಯಂತೆ.
ನಿರ್ಮಾಪಕ ದಿನೇಶ್ ಬಾಬು ಅವರ ಯೋಜನೆಗಳ ಪ್ರಕಾರ ಈ ಚಿತ್ರ ಈಗಾಗಲೇ ಜನವರಿ, ಫೆಬ್ರವರಿ ತಿಂಗಳಲ್ಲೇ ಬಿಡುಗಡೆ ಕಾಣಬೇಕಿತ್ತು. ಕಾರಣಾಂತರಗಳಿಂದ ಚಿತ್ರ ಮುಂದೂಡಲ್ಪಟ್ಟಿತು. ಕೊನೆಗೆ ಈ ಯುಗಾದಿಗೆ ಬಿಡುಗಡೆ ಎಂಬ ಸುದ್ದಿಯೂ ಕೇಳಿ ಬಂದರೂ, ಚಿತ್ರ ಆಗಲೂ ಬಿಡುಗಡೆಯಾಗಲಿಲ್ಲ. ಇದೀಗ ಮೇ 28ಕ್ಕೆ ಎಂಬ ಮಾಹಿತಿ ಹೊರಬಿದ್ದಿದೆ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು, ಉತ್ತಮ ಪ್ರಶಂಸೆಯೂ ಕೇಳಿ ಬಂದಿದೆ.
ಹಾಂ ಅಂದಹಾಗೆ, ಕಾಕತೀಳೀಯವೋ ಎಂಬಂತೆ ರವಿಚಂದ್ರನ್ ಅವರ ಹುಟ್ಟುಹಬ್ಬದ ದಿನವೇ ಈ ಹೂ ಗಿಫ್ಟಾಗಿ ಬಿಡುಗಡೆಯಾಗಲಿದೆ. ಆದರೆ ಹುಟ್ಟುಹಬ್ಬದ ದಿನ ಈ ಹೂ ರವಿಮಾಮ ಅವರ ಮೊಗದಲ್ಲಿ ನಗು ಅರಳಿಸಲಿದೆಯೋ ಕಾದು ನೋಡದೆ ವಿಧಿಯಿಲ್ಲ.