ಸದ್ಯವೇ ಹಲವು ಬಹುನಿರೀಕ್ಷಿತ ಚಿತ್ರಗಳು ಚಿತ್ರ ಮಂದಿರಕ್ಕೆ ಲಗ್ಗೆ ಹಾಕಲಿವೆ ಎಂಬ ಸುದ್ದಿ ಕೇಳಿದ್ದೆವು. ಇದೀಗ ಅವುಗಳ ಪಟ್ಟಿಗೆ ಇನ್ನೂ ಮೂರು ಚಿತ್ರಗಳ ಸೇರ್ಪಡೆಯಾಗಿವೆ. ಅವೇ ನಾಯಕ, ಸಂಚಾರಿ ಹಾಗೂ ನಾವು ನಮ್ಮ ಹೆಂಡತಿಯರು. ಇದೇನಪ್ಪಾ, ಸಾಲು ಸಾಲು ಚಿತ್ರಗಳು ಬಂದರೆ ನೋಡೋದು ಯಾವಾಗ, ಯಾವುದನ್ನು ಅಂತೆಲ್ಲಾ ಕೇಳಬೇಡಿ. ಸೆಲೆಕ್ಟಿಂಗ್ ಕಾರ್ಯವಂತೂ ನಿಮ್ಮದೇ ಬಿಡಿ.
ಹೌದು ಸಾಲು ಸಾಲು ಚಿತ್ರಗಳಲ್ಲಿ ಸದ್ಯವೇ ಚಿತ್ರ ಮಂದಿರಕ್ಕೆ ಬರುವ ಚಿತ್ರ ನಾಯಕ. ಪಿ. ರಮೇಶ್ ಕುಮಾರ್ ಹಾಗೂ ಜಿ. ಪ್ರದೀಪ್ ಕುಮಾರ್ ನಿರ್ಮಿಸಿರುವ ಈ ಚಿತ್ರವನ್ನು ತಮಿಳು ಚಿತ್ರ ನಿರ್ದೇಶಕ ಪಿ.ಸಿ. ಶೇಖರ್ ನಿರ್ದೇಶಿಸಿದ್ದಾರೆ. ನವೀನ್ ಚಿತ್ರದ ನಾಯಕ, ವೀರ ಮದಕರಿ ಖ್ಯಾತಿಯ ರಾಗಿಣಿ ನಾಯಕಿ. ಮುರುಳಿ ಕ್ರಿಶ್ ಛಾಯಾಗ್ರಹಣ, ಅರ್ಜುನ್ ಅವರ ಹಿನ್ನೆಲೆ ಸಂಗೀತ ಇದೆ. ಒಟ್ಟಾರೆ ಯುವ ನಟರ ಸಮೂಹವಾಗಿರುವ ಚಿತ್ರ ಬಹು ನಿರೀಕ್ಷೆ ಮೂಡಿಸಿದೆ ಎನ್ನುವುದು ಸ್ವತಃ ಚಿತ್ರತಂಡದ ಮಾತು.
MOKSHA
ಇನ್ನು ಸಂಚಾರಿ ಬಗ್ಗೆ ನೋಡಿದರೆ, ಈಗಾಗಲೇ ಇದರ ಮೊದಲ ಪ್ರತಿ ಸಿದ್ಧವಾಗಿದೆ. ಲಕ್ಷ್ಮಯ್ಯ, ರಾಮಪ್ಪ ಮತ್ತು ಪ್ರಭಾಕರ್ ಕೂಡಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕಿರಣ್ ಗೋವಿ ನಿರ್ದೇಶನವಿದೆ. ವಿ. ನಾಗೇಂದ್ರ ಪ್ರಸಾದ್ ಹಾಗೂ ಜಯಂತ್ ಕಾಯ್ಕಿಣಿ ಸಾಹಿತ್ಯ, ವಿಜಯ್ ಮೋಹನ್ ಛಾಯಾಗ್ರಹಣ, ಅರ್ಜುನ್ ಸಂಗೀತ ಲಭಿಸಿದೆ. ಚಿತ್ರದಲ್ಲಿ ದಿಲೀಪ್ ರಾಜ್, ರಾಜ್, ಬಿಯಂಕಾ ದೇಸಾಯಿ, ರಂಗಾಯಣ ರಘು, ಬುಲೆಟ್ ಪ್ರಕಾಶ್ ಮುಂತಾದವರು ಇದ್ದಾರೆ.
ವಿ. ಶ್ರೀನಿವಾಸ್ ಮೂರ್ತಿ ನಿರ್ಮಿಸುತ್ತಿರುವ ಸೀತಾರಾಂ ಕಾರಂತ್ ನಿರ್ದೇಶನದ ಚಿತ್ರ ನಾವು ನಮ್ಮ ಹೆಂಡತಿಯರು. ಇದರ ಮೊದಲ ಪ್ರತಿ ಸಿದ್ಧವಾಗಿದೆ. ಚಿತ್ರಕ್ಕೆ ಶಶಿಧರ್ ಭಟ್ ಸಂಭಾಷಣೆ ಲಭಿಸಿದೆ. ಆರ್. ಮಂಜುನಾಥ್ ಛಾಯಾಗ್ರಹಣ, ಎಸ್.ಜೆ. ಪ್ರಸನ್ನ ಸಂಗೀತ, ಗೋವರ್ಧನ್ ಸಂಕಲನ ಇದೆ. ತಾರಾಂಗಣದಲ್ಲಿ ಹರೀಶ್ ರಾಜ್, ನೇತ್ರಾ ಶೆಟ್ಟಿ ಪ್ರಕಾಶ್, ಅಶ್ವಿನಿ, ಮುನ್ನಾ, ಅಕ್ಷತಾ ಶೆಟ್ಟಿ ಮತ್ತಿತರರು ಇದ್ದಾರೆ. ಆದರೆ ಈ ಮೂರರ ಪೈಕಿ ಯಾವುದಕ್ಕೆ ಪ್ರೇಕ್ಷಕ ಕೈ ಎತ್ತುತ್ತಾನೋ, ಯಾವುದಕ್ಕೆ ಕೈಕೊಡುತ್ತಾನೋ ಎಂದು ತಿಳಿಯಲು ಕಾಯಲೇಬೇಕು.