ಪ್ರಕೃತಿಯ ಮಡಿಲಾಗಿರುವ ಮುಳ್ಳಯ್ಯನಗಿರಿ, ಮೇಲುಕೋಟೆ, ಶ್ರೀರಂಗಪಟ್ಟಣ, ಕೆಮ್ಮಣ್ಣುಗುಂಡಿ ಮೊದಲಾದ ಕಡೆ ಚಿತ್ರೀಕರಣ ನಡೆಸಿ ಒಂದು ವಿಶಿಷ್ಟ ಚಿತ್ರ ಕಟ್ಟಿಕೊಡುವ ಕಾರ್ಯ ಸಾಕಷ್ಟು ಕಡೆ ಆಗಿದೆ. ಜನ ವಿಭಿನ್ನ ರೀತಿಯಲ್ಲಿ ಈ ತಾಣವನ್ನು ನೋಡಿದ್ದಾರೆ. ಆದರೆ ಪ್ರಕೃತಿಯ ಸೊಬಗೇ ಅಂತದ್ದು, ಎಷ್ಟು ಸಾರಿ ನೋಡಿದರೂ ಮತ್ತೆ ನೋಡಬೇಕು ಅನ್ನಿಸುತ್ತದೆ. ಸೃಷ್ಟಿಯ ಸೌಂದರ್ಯವೇ ಅಂಥದ್ದು, ಮೊಗೆದಷ್ಟೂ ಧಾರಾಳ. ಇಂತದ್ದೇ ಅಪೂರ್ವ ನೆಲದಲ್ಲಿ ಸಿದ್ಧಗೊಂಡಿರುವ ಚಿತ್ರ ಕಾಲ್ಗೆಜ್ಜೆ.
ಇದೀಗ ಇದರ ಚಿತ್ರೀಕರಣ ಪೂರ್ಣಗೊಂಡಿದ್ದು, ರೀ ರೆಕಾರ್ಡಿಂಗ್ ಕಾರ್ಯ ಭರದಿಂದ ಸಾಗಿದೆ. ಎ. ನಾಗಭೂಷನ್ ನಿರ್ಮಿಸುತ್ತಿರುವ ಈ ಚಿತ್ರ ಸಂಗೀತ ಪ್ರಧಾನ ಎಂದು ಹೇಳಲಾಗುತ್ತಿದೆ. ವಿಶ್ವಾಸ್- ರೂಪಿಕಾ ನಟ ನಟಿಯರಾಗಿ ಅಭಿನಯಿಸಿದ್ದಾರೆ. ಚಿತ್ರದ ಚಿತ್ರೀಕರಣ, ಎಡಿಟಿಂಗ್, ಡಬ್ಬಿಂಗ್ ಕಾರ್ಯ ಈಗಾಗಲೇ ಮುಗಿದಿದೆ. ಈಗೇನಿದ್ದರೂ, ರೀ ರೆಕಾರ್ಡಿಂಗ್ ನಡೆಯುತ್ತಿದೆ. ಚಿತ್ರದ ಅಂತಿಮ ಹಂತದ ಕೆಲಸ ನಡೆಯುತ್ತಿದ್ದು, ಶೀಘ್ರವೇ ತೆರೆಗೆ ಬರಲಿದೆ.
ಟಿ.ಎಸ್. ನಾಗಾಭರಣ, ಎಸ್. ಮಹೇಂದರ್ ಹಾಗೂ ವಿ. ಮನೋಹರ್ ಸಹಕಾರದ ಜತೆ ವೀನಸ್ ಮೂರ್ತಿ ಅದ್ಬುತ ಛಾಯಾಗ್ರಹಣ ಚಿತ್ರಕ್ಕೆ ಲಭಿಸಿದೆಯಂತೆ. ಸಂಗೀತ ಪ್ರೇಮಿ ಹಾಗೂ ವಯಲಿನ್ ವಾದಕನಾದ ನಾಯಕ ಹಾಗೂ ನೃತ್ಯಪಟು ನಾಯಕಿ ನಡುವಿನ ನಿಷ್ಕಲ್ಮಶ ಪ್ರೇಮವೇ ಚಿತ್ರದ ಜೀವಾಳ. ಚಿತ್ರದಲ್ಲಿ ಇವರ ಜತೆ ನಟ ಶ್ರೀಧರ್, ನೀನಾಸಂ ಅಶ್ವತ್ಥ್, ಅನಂತನಾಗ್, ಸುಮಿತ್ರಾ, ರಂಗಾಯಣ ರಘು, ತಬಲಾ ನಾಣಿ ಮುಂತಾದ ಕಲಾವಿದರು ಇದ್ದಾರೆ.