ವಿಷ್ಣು ನನ್ನೊಂದಿಗೇ ಇದ್ದಾರೆ, ಆಪ್ತರಕ್ಷಕಕ್ಕೆ ಥ್ಯಾಂಕ್ಸ್: ಭಾರತಿ!
MOKSHA
ಅಪ್ತರಕ್ಷಕ ಚಿತ್ರ ಭರ್ಜರಿ ಹಿಟ್ ಆಗಿದ್ದಕ್ಕೆ ಸ್ವತಃ ವಿಷ್ಣವರ್ಧನ್ ಧರ್ಮಪತ್ನಿ ಭಾರತೀ ವಿಷ್ಣುವರ್ಧನ್ ತುಂಬಾ ಖುಷಿಯಾಗಿದ್ದಾರೆ. ವಿಷ್ಣು ಅವರ ಅಭಿಮಾನಿಗಳೇ ಚಿತ್ರವನ್ನು ಗೆಲ್ಲಿಸಿದ್ದು, ನನಗೀ ಸಂದರ್ಭ ಹೇಗೆ ಭಾವನೆಗಳನ್ನು ವ್ಯಕ್ತಪಡಿಸಬೇಕೋ ತಿಳಿಯುತ್ತಿಲ್ಲ ಎಂದು ಭಾರತಿ ಸಂತಸ ವ್ಯಕ್ತಪಡಿಸಿದ್ದಾರೆ.
ವಿಷ್ಣು ಅವರ ಚಿತ್ರ ಬದುಕಿನ ಅಂತಿಮ ಪಯಣವಾದ ಆಫ್ತರಕ್ಷಕಕ್ಕೆ ಪ್ರೇಕ್ಷಕರು ನಿಜಕ್ಕೂ ಅತ್ಯದ್ಭುತ ಪ್ರತಿಕ್ರಿಯೆ ತೋರಿದ್ದಾರೆ. ನಾನು ಈಗ ಖಂಡಿತವಾಗಿಯೂ ನನ್ನ ವಿಷ್ಣು ಅವರನ್ನು ಕಳೆದುಕೊಂಡಿದ್ದೇನೆಂದು ಅನಿಸುತ್ತಿಲ್ಲ. ಅವರೀಗಲೂ ನನ್ನೊಂದಿಗೇ ಇದ್ದಾರೆ ಅನಿಸುತ್ತಿದೆ. ಅವರ ಮರಣಾ ನಂತರ ಬಿಡುಗಡೆಯಾದ ಆಪ್ತರಕ್ಷಕ ಚಿತ್ರವೇ ಇದಕ್ಕೆ ಕಾರಣ. ಆ ಮೂಲಕ ನಾನು ವಿಷ್ಣು ಅವರನ್ನು ದಿನವೂ ಕಾಣುತ್ತೇನೆ. ವಿಷ್ಣು ಸದಾ ನಮ್ಮ ಮನೆಯಲ್ಲಿ ನನ್ನ ಬೆಂಬಲಕ್ಕೆ ನಿಂತಿದ್ದಾರೆಂದು ಭಾಸವಾಗುತ್ತಿದೆ. ದಿನವೂ ಸಂಜೆ ಶೂಟಿಂಗಿಂದ ಮನೆಗೆ ವಿಷ್ಣು ಮರಳುತ್ತಿದ್ದಾರೆಂಬ ಅನುಭವವಾಗುತ್ತಿದೆ. ಇದಕ್ಕೆಲ್ಲ ಆಪ್ತರಕ್ಷಕದ ಯಶಸ್ಸೇ ಕಾರಣ ಎಂದು ಭಾವಪರವಶರಾಗಿ ಭಾರತಿ ನುಡಿದಿದ್ದಾರೆ.
ಆಪ್ತರಕ್ಷಕ ಚಿತ್ರವೀಗ ಭರ್ಜರಿ ಯಶಸ್ಸು ಕಂಡು ಕನ್ನಡ ಚಿತ್ರರಂಗದಲ್ಲಿ ಈವರೆಗೆ ಕಾಣದ ಗಳಿಕೆಯನ್ನು ಪಡೆಯುತ್ತಿದೆ. ಈಗಾಗಲೇ ಚಿತ್ರ ಭರ್ಜರಿ ಪ್ರದರ್ಶನ ಕಂಡು ಶತದಿನೋತ್ಸವದತ್ತ ಹೆಜ್ಜೆಯಿಡುತ್ತಿದೆ.