ನಿಮಗೆ ಮನೋಜ್ ಕುಮಾರ್ ಗೊತ್ತಿರಬೇಕಲ್ಲಾ? ಅದೇ ಭಾರತೀಯ ಚಿತ್ರರಂಗ ಕಂಡ ಒಬ್ಬ ಮಹಾನ್ ಚೇತನ. ಅದೇ ದಾದಾ ಸಾಹೇಬ್ ಫಾಲ್ಕೆ ಪುರಸ್ಕ್ಕತ ನಿರ್ದೇಶಕ, ನಟ ಮನೋಜ್ ಕುಮಾರ್ ಇದೇ ಮೇ 15ಕ್ಕೆ ಬೆಂಗಳೂರಿಗೆ ಬರಲಿದ್ದಾರೆ!
ಅವರು ಅಂದಿನ ದಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ `ಮ್ಯಾಕ್ಸ್ವರ್ಥ್ ಮಧುರ ಸಂಗೀತ ಸಮಾರಂಭ'ದಲ್ಲಿ ಭಾಗವಹಿಸಲಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಅವರಿಗೆ ಗೀತ ನಮನ ಸಲ್ಲಲಿದೆ. ಇವರ ಅಭಿನಯದ ಜನಪ್ರಿಯ ಚಿತ್ರದ ಗೀತೆಗಳನ್ನು ಹಿನ್ನೆಲೆ ಗಾಯಕರಾದ ಪ್ರಿಯದರ್ಶಿನಿ, ಚಂದ್ರಿಕಾ ಗುರುರಾಜ್, ಓಂ ಚಕ್ರವರ್ತಿ(ಮುಖೇಶ್ ಕಂಠವನ್ನು ಅನುಕರಿಸುವ ಗಾಯಕ), ಡಾ.ಸಲೀಮ್ ಮೊದಲಾದವರು ಹಾಡಲಿದ್ದಾರೆ.
ಕಾರ್ಯಕ್ರಮ ಇಷ್ಟೇ ಆಗಿದ್ದರೆ ಹೆಚ್ಚಿನ ಜನ ಸೇರುವುದಿಲ್ಲ ಎಂದು ಅರಿತ ಆಯೋಜಕರು ಅಂದು ಕನ್ನಡದ ಜನಪ್ರಿಯ ನಾಯಕರಾದ ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್, ರವಿಚಂದ್ರನ್, ಭಾರತಿ ವಿಷ್ಣುವರ್ಧನ್, ಜಯಂತಿ, ಜಯಮಾಲಾ ಮತ್ತಿತರ ಅದ್ವಿತೀಯ ಕಲಾವಿದರ ಗೀತೆಗಳಿಗೂ ಹೊಸ ಸ್ಪರ್ಶ ನೀಡಲಿದ್ದಾರೆ!
ಸಂಜೆ 5.30ಕ್ಕೆ ಶುರುವಾಗಲಿರುವ ಕಾರ್ಯಕ್ರಮದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಮತ್ತು ಕುಟುಂಬ, ಭಾರತಿ ವಿಷ್ಣುವರ್ಧನ್, ಜಯಂತಿ, ಅಂಬರೀಷ್- ಸುಮಲತಾ, ಶಿವರಾಂ, ಪೊಲೀಸ್ ಆಯುಕ್ತ ಶಂಕರ್ ಬಿದರಿ, ಶಾಸಕ ನೆ.ಲ.ನರೇಂದ್ರಬಾಬು ಉಪಸ್ಥಿತರಿರುತ್ತಾರೆ. ಈ ಸಮಾರಂಭದಲ್ಲಿ ಬರುವ ಆದಾಯವನ್ನು ವಿಕಲಚೇತನ ಮಕ್ಕಳ ಕಲ್ಯಾಣ ನಿಧಿಗೆ ಮೀಸಲಿಡಲು ಆಯೋಜಕರು ನಿರ್ಧರಿಸಿದ್ದಾರೆ. ಹೆಚ್ಚಿನ ಮಾಹಿತಿ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಲು www.madhursangeeth.shivashakthi.in ಸಂಪರ್ಕಿಸಿ.