ಚುಕು ಬುಕು ರೈಲು, ನಿಲ್ಲೊದಿಲ್ಲ ಎಲ್ಲೂ, ಯಾಕಿಂಗೆ ಓಡುತೈತೋ... ಈ ಹಾಡು ಕೇಳಿದ ತಕ್ಷಣ ನೆನಪಾಗುವುದು ಚೆಲ್ಲು ಚೆಲ್ಲು ಸ್ಮೈಲಿನ ಹುಡುಗಿ ಜೆನ್ನಿಫರ್ ಕೊತ್ವಾಲ್. ಇವರೀಗ ಅಷ್ಟಾಗಿ ಸುದ್ದಿಯಲ್ಲಿಲ್ಲ. ಒಂದೆರಡು ಚಿತ್ರ ಕೈಲಿದೆಯಾದರೂ, ಹೇಳಿಕೊಳ್ಳುವಂಥ ಗಮನಾರ್ಹ ಚಿತ್ರಗಳು ಕಾಣುತ್ತಿಲ್ಲ.
ಜೋಗಿಯಂಥ ಹಿಟ್ ಚಿತ್ರದಲ್ಲಿ ಭಾಗಿಯಾಗಿದ್ದ ಕೊತ್ವಾಲರು ಅದೇಕೋ ಡಿಮ್ ಆಗಿದ್ದಾರೆ. ಅದಕ್ಕೆ ಕಾರಣ ಅವರು ಸಿಕ್ಕ ಸಿಕ್ಕ ಚಿತ್ರ, ಪಾತ್ರಗಳನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳುವುದೋ ಗೊತ್ತಿಲ್ಲ. ಒಟ್ಟಾರೆ ಜೋಗಿ ನಂತರ ಜೆನ್ನಿ ಹಲವು ತೋಪು ಚಿತ್ರಗಳಲ್ಲಿ ಸಾಲು ಸಾಲು ನಟಿಸಿದ್ರು. ಒಟ್ಟಾರೆ ಗೆದ್ದುದಕ್ಕಿಂತ ಬಿದ್ದದ್ದೇ ಹೆಚ್ಚು ಜೆನ್ನಿ.
ಇದೀಗ ಓಂ ಪ್ರಕಾಶ್ ರಾವ್ ನಿರ್ದೇಶನದ ಹುಲಿ ಚಿತ್ರದಲ್ಲಿ ಜೆನ್ನಿ ನಾಯಕಿಯ ಪಾತ್ರ ಮಾಡುತ್ತಿದ್ದಾರೆ. ಅದು ನಾಯಕ ಪ್ರಧಾನ ಚಿತ್ರ. ಅಂತೆಯೇ ಜೆನ್ನಿ ನಟಿಸಿರುವ ಮತ್ತೊಂದು ಚಿತ್ರ ಬಿಸಿಲೇ. ಅದರ ಸಾರಥಿ ಚಂದ್ರು. ದಿಗಂತ್ ಹಾಗೂ ಜೆನಿಫರ್ ಜೋಡಿಯ ಈ ಚಿತ್ರ ಶುರುವಾಗಿ ಮೂರು ವರ್ಷವೇ ಕಳೆದಿದೆ. ಹೀಗಿದ್ದೂ ಚಿತ್ರ ತೆರೆಕಾಣುತ್ತಿಲ್ಲ.
ಒಟ್ಟಾರೆ ಭವಿಷ್ಯದ ಬಗ್ಗೆ ಹಿಂದೆ ಚಿಂತಿಸದ, ಈಗ ಚಿಂತಿಸುವ ಮನಸ್ಸು ಮಾಡುತ್ತಿರುವ ಜೆನ್ನಿಗೆ ಆದಷ್ಟು ಬೇಗ ಒಂದು ಬ್ರೇಕ್ ಸಿಗುವ ಚಿತ್ರ ಲಭಿಸಲಿ ಎಂದು ಹಾರೈಸೋಣ.