ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಚಿತ್ರರಂಗದಲ್ಲಿಗ ಗರಿಗೆದರಿದ ಚುನಾವಣಾ ಕಾವು (Karnataka Film Chamber of Comerce | Kannada Cinema | Basanth Kumar | Jayamala)
ಚುನಾವಣೆ ಕಾವು ಇದೀಗ ಚಲನಚಿತ್ರ ರಂಗವನ್ನು ಪ್ರವೇಶಿಸಿದೆ. ಇದಕ್ಕೆಲ್ಲಾ ಕಾರಣ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ. ಹೌದು. ಹಿಂದೆಲ್ಲಾ ಇದರತ್ತ ಸುಳಿಯಲು ಸಹ ಇಷ್ಟ ಪಡದ ನಿರ್ಮಾಪಕರು ಚುನಾವಣೆ ಅಖಾಡಕ್ಕೆ ಇಳಿದು ಪ್ರತಿಷ್ಠೆಯನ್ನು ಪಣಕ್ಕಿಡಲು ಆರಂಭಿಸಿದ್ದಾರೆ.
ಚುನಾವಣೆ ಮೇ 8ಕ್ಕೆ ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕರಾದ ಬಸಂತ್ ಕುಮಾರ್ ಪಾಟೀಲ್, ಜಾನಕಿ ರಾಮ್ ಹಾಗೂ ವಿಜಯ್ ಕುಮಾರ್ ನಡುವೆ ಸಮರ ನಡೆಯಲಿದೆ. ಅನುಭವ ಹಾಗೂ ವ್ಯಕ್ತಿತ್ವದ ಆಧಾರದ ಮೇಲೆ ಬಸಂತ್ ಕುಮಾರ್ ಪಾಟೀಲ್ ಅವರು ಪೈಪೋಟಿಯಲ್ಲಿ ಮುಂದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದ್ದು, ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎನ್ನುವುದನ್ನು ಈಗಲೇ ಹೇಳಲಾಗದು.
ಈ ವರ್ಷ ಚುನಾವಣೆಯಲ್ಲಿ ಹೊಸ ನಿಯಮ ತರಲಾಗಿದ್ದು, ಅದರ ಪ್ರಕಾರ ಹಾಲಿ ಅಧಿಕಾರದಲ್ಲಿ ಇರುವವರು ತಕ್ಷಣ ಮುಂದಿನ ಅವಧಿಗೆ ಸ್ಪರ್ಧಿಸುವಂತಿಲ್ಲ. ಹೀಗಾಗಿ ಜಯಮಾಲಾ ಹಾಗೂ ಸಾ.ರಾ.ಗೋವಿಂದು ಚುನಾವಣೆಯಿಂದ ದೂರ ಉಳಿಯಬೇಕಿದೆ.
ಬಸಂತ್ ಕುಮಾರ್ ಈಗಾಗಲೇ ಸಕ್ರಿಯವಾಗಿ ಚಿತ್ರರಂಗದಲ್ಲಿ ತೊಡಗಿಕೊಂಡವರು. ನಿರ್ಮಾಪಕರಾಗಿ, ಹಂಚಿಕೆದಾರರಾಗಿ, ಹೊರಾಂಗಣ ಘಟಕದ ಮಾಲೀಕರಾಗಿ ಹೆಸರು ಮಾಡಿರುವವರು. ಜತೆಗೆ ಮೂವತ್ತಕ್ಕೂ ಹೆಚ್ಚು ವರ್ಷದ ನಂಟು ಉಳ್ಳವರು. ಅಧ್ಯಕ್ಷನಿಗೆ ಇರಬೇಕಾದ ಎಲ್ಲ ಪ್ಲಸ್ ಪಾಯಿಂಟ್‌ಗಳೂ ಪಾಟೀಲ್ ಪರ ಇರುವುದರಿಂದ ಅವರೇ ಗೆಲ್ಲುತ್ತಾರೆ ಎನ್ನುವುದು ಉದ್ಯಮದ ಮಾತು. ಅಲ್ಲದೆ, ಇರುವ 1780 ಓಟುಗಳಲ್ಲಿ 1000ದಷ್ಟು ನಿರ್ಮಾಪಕರೇ ಇದ್ದಾರೆ.
ಈಗಾಗಲೇ ಮೊಬೈಲ್ ಮೂಲಕ ಎಸ್‌ಎಂಎಸ್ ಮೂಲಕ ಬಸಂತ್ ಕುಮಾರ್ ಅವರಿಗೆ ಮತ ಹಾಕಿ ಎಂಬ ಸಂದೇಶ ರವಾನಿಸುತ್ತಿರುವ ವಿರುದ್ಧ ಕೆಲವರು ವಾಣಿಜ್ಯ ಮಂಡಳಿ ಎದುರು ಧರಣಿಯನ್ನೂ ನಡೆಸಿದ ಘಟನೆ ನಡೆದಿದೆ. ಇದೇ ವೇಳೆ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ, ಈ ರೀತಿ ಸಂದೇಶ ರವೀನಿಸುತ್ತಿರುವುದು ನಮ್ಮ ಪದಾಧಿಕಾರಿಗಳಲ್ಲ. ಇದೊಂದು ವ್ಯವಸ್ಥಿತ ಪಿತೂರಿ ಎಂದಿದ್ದಾರೆ. ಒಟ್ಟಾರೆ ಚುನಾವಣೆ ಕಾವಂತೂ ಹೆಚ್ಚಾಗಿದೆ. ಆದರೆ, ಚಿತ್ರ ಜಗತ್ತಿಗೂ ರಾಜಕೀಯ ಮೇಲಾಟ ಅಂಟಿಕೊಂಡಿರುವುದು ವಿಪರ್ಯಾಸ.