ವಿಷ್ಣು ನನ್ನ ಅಪ್ಪ, ಗೆಳೆಯ, ಮಾವ ಎಲ್ಲವೂ: ಅಳಿಯ ಅನಿರುದ್ಧ್
MOKSHA
ಇದುವರೆಗೂ ವಿಷ್ಣುವರ್ಧನ್ ಹಾಗಿದ್ದರು, ಹೀಗಿದ್ದರು ಎಂದು ವರ್ಣಿಸುವವರನ್ನು ನೋಡಿದ್ದೆವು, ಕೇಳಿದ್ದೆವು. ಆದರೆ ವಿಷ್ಣು ಅವರ ಅತ್ಯಂತ ಆತ್ಮೀಯ ಅಳಿಯ ಅನಿರುದ್ಧ ಏನನ್ನುತ್ತಾರೆ ಅಂತ ಕೇಳಿಯೇ ಇರಲಿಲ್ಲ. ಆದರೆ ಅನಿರುದ್ಧ್ ತಮ್ಮ ಮಾವ ಅವರನ್ನು ಅಪ್ಪಾವ್ರು ಅನ್ನುತ್ತಲೇ ಭಾವುಕರಾದರು. ಅಪ್ಪಾವ್ರು ಸ್ವಂತ ಅಪ್ಪನಿಗಿಂತ ನನಗೆ ಹೆಚ್ಚಾಗಿದ್ದರು. ಎಲ್ಲ ಜನ್ಮದಲ್ಲೂ ಅವರು ನನಗೆ ಅಪ್ಪಾವ್ರೇ ಎನ್ನುತ್ತಾರೆ.
ಭೌತಿಕವಾಗಿ ಅವರು ನಮ್ಮ ಮುಂದೆ ಇಲ್ಲ. ಆದರೆ ಮಾನಸಿಕವಾಗಿ ನೆಲೆಸಿ ಬಿಟ್ಟಿದ್ದಾರೆ. ಅವರಿಲ್ಲದ ಜೀವನ ಕಲ್ಪಿಸಿಕೊಳ್ಳುವುದು ಸಹ ನರಕ ಸದೃಶ. ಮನೆಯಿಂದ ಹಿಡಿದು ರಕ್ತದ ಕಣ ಕಣದಲ್ಲೂ ಬೆರೆತುಹೋಗಿದ್ದೆ. ನನ್ನನ್ನು ಅಳಿಯ ಎಂದು ಅವರು ಎಂದೂ ಭಾವಿಸಿರಲಿಲ್ಲ. ಹೆತ್ತ ಮಗನಾಗಿ ಪರಿಗಣಿಸಿದ್ದರು. ಕಣ್ಣಿನ ರೆಪ್ಪೆಯಂತೆ ನೋಡಿಕೊಂಡರು. ಭಾವನಾತ್ಮಕವಾಗಿ ನಾವಿಬ್ಬರೂ ಗೆಳೆಯರಾಗಿದ್ದೆವು. ನಾನು ಅಪ್ಪಾವ್ರಿಗೆ ಗೆಳೆಯನಾಗಿ, ಅಳಿಯನಾಗಿ, ಮಗನಾಗಿ, ಶಿಷ್ಯನಾಗಿದ್ದೆ ಎನ್ನುತ್ತಾರೆ. ಹೀಗೆ ಅನಿ-ವಿಷ್ಣು ಒಡನಾಟ ಭಾವನೆಗಳಿಗೆ ನಿಲುಕದ್ದು. ಮಾವ ಅಳಿಯನ ಬೆಸುಗೆ ಎಂಥದ್ದು ಎಂಬ ಬಗ್ಗೆ ಕನ್ನಡಿ ಹಿಡಿದರು.
ವಿಷ್ಣುವರ್ಧನ್ ಜತೆ ಚಿತ್ರ ಮಾಡುವ ಅವಕಾಶ ಇವರಿಗೆ ಒದಗಿ ಬರಲೇ ಇಲ್ಲ. ಆದರೆ, ವಿಷ್ಣುವರ್ಧನ್ ಅವರಿಗಾಗಿ ಇವರೊಂದು ಚಿತ್ರಕಥೆಯನ್ನು ಹೆಣೆದಿಟ್ಟಿದ್ದರು. ಅನಿ ಇದರಲ್ಲಿ ವಿಷ್ಣು ಅವರ ಅಸಿಸ್ಟೆಂಟ್. ಅವರು ಪೊಲೀಸ್ ಇನ್ಸ್‌ಪೆಕ್ಟರ್. ಇಬ್ಬರೂ ಪೊಲೀಸರು. ಇಬ್ಬರೂ ಸೇರಿ ಒಂದಷ್ಟು ಹೊತ್ತು ಜಾಲಿ ಆಟ ಆಡಿ, ಜನರಿಗೆ ಮನರಂಜನೆ ನೀಡಬೇಕೆಂದು ಕೊಂಡಿದ್ದರು. ಇದೊಂದು ಸುಂದರ ಚಿತ್ರವಾಗಿ ಜನರನ್ನು ರಂಜಿಸಲು ಬರಬೇಕಿತ್ತು. ಅನಿರುದ್ಧ ಅವರು ವಿಷ್ಣುವರ್ಧನ್ ಅವರಿಗೆ ಕಥೆ ಸಹ ಹೇಳಿದ್ದರು. ಒಪ್ಪಿಗೆಯೂ ಸಿಕ್ಕಿತ್ತು. ಆದರೆ, ವಿಷ್ಣು ಖಾಸಗಿ ಆಸಕ್ತಿ ಬಗ್ಗೆ ಕೇಳಿದರೆ ಅವರು ಹೇಳೋದು, 'ಅವರು ನಮ್ಮ ಮನೆಯಲ್ಲಿ ಓಪನ್ ಬುಕ್ ಥರ ಇದ್ರು. ಎಲ್ಲವನ್ನೂ ಚರ್ಚೆಗೆ ಇಡುತ್ತಿದ್ದರು. ತಪ್ಪು ಸರಿ ಪರಾಂಬರಿಸುತ್ತಿದ್ದರು. ಹೊಸ ವಿಚಾರ ತಿಳಿದುಕೊಂಡರೆ, ಪುಸ್ತಕ ಓದಿದರೆ ಆ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತಿದ್ದರು' ಎನ್ನುತ್ತಾರೆ.
ಎಂ.ಎಸ್.ಸತ್ಯು ಅವರ ಇಜ್ಜೋಡು ಚಿತ್ರದಲ್ಲಿ ಅನಿರುದ್ಧ್ ನಾಯಕನಾಗಿ ನಟಿಸುವ ಮೂಲಕ ಬಹುಕಾಲದ ನಂತರ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಇದರ ಜೊತೆಗೆ ಚಿತ್ರ ನಿರ್ದೇಶಿಸುವ ಕನಸೂ ಅನಿರುದ್ಧ್‌ಗಿದೆ. ಅನಿರುದ್ಧ್‌ಗೆ ಶುಭಾಶಯ ಕೋರೋಣ.