ಆಕ್ಷನ್ ಚಿತ್ರಗಳ ಮೂಲಕ ಸಾಕಷ್ಟು ಹೆಸರು ಮಾಡಿರುವ ನಿರ್ದೇಶಕ ಥ್ರಿಲ್ಲರ್ ಮಂಜು ಇದೀಗ ಮಾತೆತ್ತಿದರೆ ಜಯಹೇ ಅನ್ನುತ್ತಿದ್ದಾರೆ. ಅದೇನಾಯ್ತಪ್ಪಾ ಇವರಿಗೆ ಇದ್ದಕ್ಕಿದ್ದ ಹಾಗೆ ದೇಶಭಕ್ತಿ ಜಾಸ್ತಿಯಾಯ್ತಾ ಎನ್ನಬೇಡಿ. ಕಾರಣ ಸಿಂಪಲ್. ಥ್ರಿಲ್ಲರ್ ಇಷ್ಟೊಂದು ಥ್ರಿಲ್ ಆಗಲು ಇರುವ ಕಾರಣ ಇವರ ಹೊಸ ಚಿತ್ರ ಜಯಹೇ. ಇದೊಂದು ಆಕ್ಷನ್ ಚಿತ್ರ ಅಂತ ಹೇಳುವ ಅಗತ್ಯವೇ ಇಲ್ಲ. ಆದರೆ ಇದು ನಾಯಕ ಪ್ರಧಾನವಲ್ಲ, ಬದಲಾಗಿ ನಾಯಕಿ ಪ್ರಧಾನ ಚಿತ್ರ. ಸಮಾಜದ ಪಿಡುಗುಗಳನ್ನು ಎದುರಿಸಲು, ಸರ್ವನಾಶ ಮಾಡಲು ಸಿಡಿದೇಳುವ ನಾಯಕಿಯ ಕುರಿತ ಚಿತ್ರ.
ಅನ್ಯಾಯದ ವಿರುದ್ಧ ಸಿಡಿದೇಳುವ ನಾಯಕಿ ಹೆಸರು ಆಯೇಷಾ. 'ಪೊಲೀಸ್ ಸ್ಟೋರಿ'ಯಂಥ ಇನ್ನೊಂದು ಗೆಲುವಿನ ಚಿತ್ರದ ಹಸಿವಿನಲ್ಲಿರುವ ಮಂಜು ಈ ಚಿತ್ರವನ್ನು ಅತ್ಯಂತ ಮಹತ್ವಾಕಾಂಕ್ಷೆಯಿಂದ ಸಿದ್ಧಪಡಿಸುತ್ತಿದ್ದಾರೆ. ಗೆಲುವನ್ನು ನಿರ್ಧರಿಸುವುದು ಮಾತ್ರ ಪ್ರೇಕ್ಷಕರ ಕೈಲಿದೆ. ಇಂದು ಕನ್ನಡದಲ್ಲಿ ಸಾಕಷ್ಟು ಆಕ್ಷನ್ ಚಿತ್ರಗಳು ಬರುತ್ತಿದ್ದು, ತೀರಾ ಭಿನ್ನವಾಗಿದ್ದರೆ ಮಾತ್ರ ಒಪ್ಪಿಕೊಳ್ಳುವ ಮಾತು ಅಭಿಮಾನಿಗಳದ್ದು.
ಅತ್ಯಂತ ಮಾತನಾಡುವ ಉತ್ಸಾಹ ತೋರುತ್ತಿರುವ ಮಂಜು, ನಟಿಯ ಬಗ್ಗೆ ಹೇಳುವ ಅಭಿಮಾನದ ಮಾತುಗಳು ಅಪಾರ. ಈಕೆ ಮುಂದೆ ಇನ್ನೊಬ್ಬ ಮಾಲಾಶ್ರೀ ಆಗುತ್ತಾರೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಇಡೀ ಚಿತ್ರ ಹೊಡೆದಾಟದಿಂದ ಕೂಡಿದ್ದು, ಎಲ್ಲಿಯೂ ಡ್ಯೂಪ್ ಬಳಸದೇ ಸಾಹಸ ಆಯೇಶಾ ಮೇಳೈಸಿದ್ದಾರೆ. ಆಕ್ಷನ್‌ಗೆ ಹೇಳಿ ಮಾಡಿಸಿದ ಮೈಕಟ್ಟು, ದಾಡಸಿತನ ಹಾಗೂ ವರ್ಚಸ್ಸನ್ನು ಇವರು ಹೊಂದಿದ್ದಾರೆ ಎಂದು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ ಮಂಜು. ಆಯೇಶಾ ಕರಾಟೆಯನ್ನೂ ಎಳವೆಯಿಂದಲೇ ಕರಗತ ಮಾಡಿದ ಧೀರೆ. ಹಾಗಾಗಿ ಈಕೆಗೆ ಫೈಟ್ ಮಾಡೋದೆಂದರೆ ಡ್ಯುಯೆಟ್ ಹಾಡುವಷ್ಟೇ ಸಲೀಸು.
ಚಿತ್ರಕ್ಕೆ ಥ್ರಿಲ್ಲರ್ ಮಂಜು ಅವರೇ ಸಾಹಿತ್ಯ ಬರೆದಿದ್ದಾರೆ. ಸ್ನೇಹಾ, ಸಾಗರ್, ಪ್ರಿಯಾ ಯಾದವ್, ಸುಧೀಂದ್ರ ಮತ್ತಿತರರು ಹಾಡಿದ್ದಾರೆ. ಒಟ್ಟಾರೆ ಚಿತ್ರ ಬಿಡುಗಡೆ ನಂತರವಷ್ಟೆ ಚಿತ್ರದ ನಿಜವಾದ ಮರ್ಮ ಬೆಳಕಿಗೆ ಬಂದೀತು.