ಪ್ರಶಸ್ತಿ ಪಡೆಯುವ ಕ್ರೇಜ್ ಸಾಕಷ್ಟು ಜನರಿಗೆ ಇರುತ್ತದೆ. ಸಾಧನೆ ಮಾಡುವ ಮೊದಲೇ ಪ್ರಶಸ್ತಿಯ ಕನಸು ಸಾಮಾನ್ಯ ಬಿಡಿ. ಇದು ಚಿತ್ರರಂಗಕ್ಕೇನೂ ಹೊರತಾಗಿಲ್ಲ. ಸದ್ಯ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ, ಚಿತ್ರೋದ್ಯಮದಲ್ಲೇ ಪ್ರಶಸ್ತಿಗಾಗಿ ಕಸರತ್ತು ನಡೆಯೋದು ತುಂಬಾ ಕಾಮನ್ ಅಂತಾಗಿದೆ. ಆದರೆ ಇವೆಲ್ಲವುಗಳನ್ನೂ ಮೀರಿ ನಿಂತ ಕೆಲವು ನಟರು, ಚಿತ್ರೋದ್ಯಮದ ಸದಸ್ಯರು ಮಾತ್ರ ಪ್ರಶಸ್ತಿಯನ್ನು ಕೇವಲ ಪ್ರಸಾದದಂತೆ ಸ್ವೀಕರಿಸುತ್ತಾರೆ ಅಂದರೂ ತಪ್ಪಿಲ್ಲ.
ಹೀಗೆ ಪ್ರಶಸ್ತಿಗಳ ಬಗ್ಗೆ ಮಾತಾಡಹೊರಟಾಗ ಪ್ರೇಮಲೋಕದ ರವಿಚಂದ್ರನ್ ಮಾತ್ರ ಪ್ರಶಸ್ತಿಯನ್ನು ತಿರುಪತಿ ಲಡ್ಡಿಗೆ ಹೋಲಿಸುತ್ತಾರೆ. ಪ್ರಶಸ್ತಿ ಬಗ್ಗೆ ಅವರಾಡುವ ಮಾತುಗಳೇ ಅಂಥದ್ದು. 'ಪ್ರಶಸ್ತಿ ಒಂಥರಾ ತಿರುಪತಿ ಲಡ್ಡು ಇದ್ದ ಹಾಗೆ. ಅದನ್ನು ಪ್ರಸಾದದ ರೀತಿಯಲ್ಲಿ ಸ್ವೀಕರಿಸಬೇಕು. ಹಿಂದೆಲ್ಲಾ ನಾನು ಉಸಿರು ಕಟ್ಟಿಕೊಂಡು ಸಿನಿಮಾ ಮಡ್ತಾ ಇದ್ದೆ. ಅದನ್ನೇ ಆಧರಿಸಿ ಇಂದಿಗೂ ಕೆಲ ಪ್ರಶಸ್ತಿಗಳು ಲಭಿಸುತ್ತಿದೆ. ಆದರೆ ನಾನು ಎಂದೂ ಪ್ರಶಸ್ತಿಯ ಹಿಂದೆ ಬಿದ್ದವನಲ್ಲ, ಪ್ರಶಸ್ತಿಗಾಗಿ ಚಿತ್ರವನ್ನೂ ತೆಗೆದಿಲ್ಲ. ಸಿನಿಮಾ ಮಾಡುವ ಕುರಿತು ನನ್ನ ದೃಷ್ಟಿಕೋನವೇ ಬೇರೆ ಇದೆ. ಇನ್ನು ಮುಂದಿನ ದಿನಗಳಲ್ಲಿ ನನ್ನ ಸಾಕಷ್ಟು ಉತ್ತಮ ಚಿತ್ರಗಳು ಬರಲಿದ್ದು, ಚಿತ್ರೋದ್ಯಮದಲ್ಲಿ ಕ್ರಾಂತಿಯನ್ನೇ ತರುತ್ತೇನೆ' ಅನ್ನುತ್ತಾರೆ ಕ್ರೇಜಿಸ್ಟಾರ್ ರವಿಚಂದ್ರನ್.
ಆದರೆ ಅಂಬರೀಶ್ ಪ್ರಕಾರ, ಪ್ರಶಸ್ತಿಗಳು ಬರುತ್ತವೆ ಹೋಗುತ್ತವೆ. ಇವನ್ನು ಪರಿಗಣಿಸಿ ವ್ಯಕ್ತಿಯನ್ನು ಅಳೆಯುವುದು ಸರಿಯಲ್ಲ. ಚಿತ್ರರಂಗದಲ್ಲಿ ಪ್ರತಿ ಹಂತದಲ್ಲೂ ಸವಾಲು ಎದುರಾಗುತ್ತದೆ. ಅದನ್ನು ಜಯಿಸಿದಾಗ ಸಿಗುವ ಸಂತೋಷಕ್ಕಿಂತ ದೊಡ್ಡ ಪ್ರಶಸ್ತಿ ಇನ್ನೊಂದಿಲ್ಲ ಎನ್ನುತ್ತಾರೆ.
ನಾನು ನನ್ನ ಕನಸಿನ ಮೂಲಕ ಕನ್ನಡದಲ್ಲೀಗ ನಿರ್ದೇಶಿಸಲು ಹೊರಟ ರಾಷ್ಟ್ರಪ್ರಶಸ್ತಿ ಪಡೆದ ಕನ್ನಡಿಗ, ಪ್ರತಿಭಾನ್ವಿತ ನಟ ಪ್ರಕಾಶ್ ರೈ, ಬೇರೆಯವರಿಗೆ ನಾವು ಏನೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಲಿಕ್ಕಾದರೂ ಪ್ರಶಸ್ತಿ ಬರಬೇಕು. ವರ್ಷದಲ್ಲಿ ತೆರೆಕಂಡ ಅತ್ಯುತ್ತಮ ಚಿತ್ರಗಳಲ್ಲಿ ಒಬ್ಬ ನಟ ಉತ್ತಮ ಎಂದು ಆಯ್ಕೆ ಮಾಡುವುದರಿಂದ ಉಳಿದವರಿಗೂ ತಾವು ಆ ನಾಯಕನಾಗಬೇಕೆಂಬ ಛಲ ಬರುತ್ತದೆ. ಇದರಿಂದ ಉತ್ತಮ ಅಭಿನಯವೂ ಸಿಗುತ್ತದೆ. ಪ್ರಶಸ್ತಿ ಜೀವನದ ಒಂದು ಭಾಗ ಎನ್ನುತ್ತಾರೆ.